ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ‌ ಆರೋಪಿಗಳ ಖುಲಾಸೆ ನ್ಯಾಯದ ಅಪಹಾಸ್ಯ: ಇ.ಅಬೂಬಕರ್

Update: 2019-03-23 17:40 GMT

ಬೆಂಗಳೂರು, ಮಾ.23: ಸಂಜೋತಾ‌ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಅಸೀಮಾನಂದ ಸಹಿತ ಇತರ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿರುವುದು ನ್ಯಾಯದ ಅಪಹಾಸ್ಯವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೇರ್ ಮೆನ್ ಇ.ಅಬೂಬಕರ್ ಹೇಳಿದ್ದಾರೆ.

ಈ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಸಂಶಯಾಸ್ಪದ ನಡೆಯು, ಇದು ಸರಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ‌ಏಜೆನ್ಸಿಯಾಗಿಬಿಟ್ಟಿದೆ ಎಂಬುದನ್ನು ಮತ್ತೊಮ್ಮೆ ‌ಸಾಬೀತುಪಡಿಸಿದೆ‌ ಎಂದು ಅವರು ಆರೋಪಿಸಿದ್ದಾರೆ.

ಸಂಜೋತಾ ಎಕ್ಸ್‌ಪ್ರೆಸ್‌ ಸ್ಫೋಟವು ದೇಶದಲ್ಲಿ ನಡೆದ ಅತ್ಯಂತ ಭಯಾನಕ ದಾಳಿಗಳಲ್ಲೊಂದಾಗಿದ್ದು, ಇದನ್ನು ಹಿಂದುತ್ವವಾದಿ ಸಂಘಟನೆಗಳು ನಡೆಸಿದ್ದವು ಎಂದವರು ಹೇಳಿದ್ದಾರೆ.

ಈ ಘಟನೆಯಲ್ಲಿ 68 ಮಂದಿ ಸಾವನ್ನಪ್ಪಿದರು. ಅಸೀಮಾನಂದ ಮ್ಯಾಜಿಸ್ಟ್ರೇಟ್ ಮುಂದೆ ಅಪರಾಧ ಒಪ್ಪಿಕೊಂಡ ಹೊರತಾಗಿಯೂ, ಆತನಿಗೆ ಶಿಕ್ಷೆ ನೀಡುವಲ್ಲಿನ ಎನ್ಐಎಯ ವೈಫಲ್ಯವು ಈ ತನಿಖಾ ದಳದ ದಕ್ಷತೆ‌ ಮತ್ತು ವಿಶ್ವಾಸಾರ್ಹತೆಯ ಕುರಿತಂತೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದಕ್ಕೂ ಮೊದಲು ಎನ್ಐಎ ಕೋರ್ಟ್ ಅಸೀಮಾನಂದನನ್ನು ಅಜ್ಮೀರ್, ಹೈದರಾಬಾದ್‌ ನ ಮಕ್ಕಾ ಮಸ್ಜಿದ್ ಮತ್ತು ಮಾಲೆಗಾಂವ್ ಸ್ಫೋಟದಂತಹ ಭಯೋತ್ಪಾದನಾ ಪ್ರಕರಣಗಳಲ್ಲಿ ಖುಲಾಸೆಗೊಳಿಸಿದೆ. ಮುಸ್ಲಿಮರ ಹೆಸರು ಇದ್ದ ಪ್ರಕರಣಗಳಲ್ಲಿ ಎನ್ಐಎ ಅತೀವ ಉತ್ಸಾಹ ತೋರಿತ್ತು. ಆದರೆ ಈ ಪ್ರಕರಣಗಳ ಪೈಕಿ ಒಂದೇ ಒಂದು ಪ್ರಕರಣದಲ್ಲೂ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರ ಸಂಗ್ರಹಿಸುವಲ್ಲಿ ಎನ್ಐಎ ಯಾವುದೇ‌ ಉತ್ಸಾಹ ತೋರಿಲ್ಲ ಎಂದವರು ಆರೋಪಿಸಿದ್ದಾರೆ.

ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾದ ಗೋಧ್ರಾ ರೈಲು ದಹನ ಪ್ರಕರಣದ ತೀರ್ಪು ಬಂದ ದಿನವೇ ಸಂಜೋತಾ ಎಕ್ಸ್‌ಪ್ರೆಸ್‌ ಪ್ರಕರಣದಲ್ಲಿ ಯಾರಿಗೂ ಶಿಕ್ಷೆ ವಿಧಿಸದ ತೀರ್ಪು ಕೂಡ ಹೊರಬಿದ್ದಿತ್ತು ಎಂಬುದನ್ನು ಇ.ಅಬೂಬಕರ್ ನೆನಪಿಸಿದ್ದಾರೆ. ಈ ದ್ವಿಮುಖ ಧೋರಣೆಗೆ ಅಭಿಯೋಜಕರ ತಾರತಮ್ಯದ‌ ನಿಲುವು ಕಾರಣವಾಗಿದ್ದರೂ, ಇದು ನಮ್ಮ ದೇಶದ ನ್ಯಾಯ ವ್ಯವಸ್ಥೆಗೆ ಅಪಕೀರ್ತಿಯನ್ನು ತಂದೊಡ್ಡಲಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News