30 ಸಾವಿರ ಕೋಟಿ ರಫೇಲ್ ಹಗರಣವಾಗಿದ್ದರೂ ಮೋದಿ ಸರ್ಕಾರ ತನಿಖೆಗೆ ಸಿದ್ಧವಿಲ್ಲ: ಕೆ.ಹರೀಶ್ ಕುಮಾರ್

Update: 2019-03-23 18:30 GMT

ಬೆಳ್ತಂಗಡಿ : ‘30 ಸಾವಿರ ಕೋಟಿ ರಫೇಲ್ ಹಗರಣವಾಗಿದ್ದರೂ, ಕೇಂದ್ರದ ಮೋದಿ ನೇತೃತ್ವದ ಸರ್ಕಾರ ತನಿಖೆಗೆ ಸಿದ್ಧವಿಲ್ಲ. ಆ ಬಗೆಗೆ ಜಂಟಿ ಸದನ ಸಮಿತಿ ಮಾಡಿ ತನಿಖೆ ಮಾಡಲೂ ತಯಾರಿಲ್ಲ. ಹೀಗಿರುವಾಗ  ಬಿಜೆಪಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.

ಅವರು ಶನಿವಾರ ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,’ ಭ್ರಷ್ಟಾಚರದ ಆರೋಪ ಬಂದಾಗ ಯಾವುದೇ ಸರ್ಕಾರ ತನಿಖೆಗೆ ಒಳಪಡಿಸಬೇಕು. ಆದರೆ ರಫೇಲ್ ಹಗರಣ ಕುರಿತು ತನಿಖೆ ನಡೆಯಬೇಕು ಎಂದರೂ ಸರ್ಕಾರ ತನಿಖೆಗೆ ನೀಡಲು ಸಿದ್ಧವಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷ 2ಜಿ ಸ್ಪೆಕ್ಟ್ರಂ ಹಗರಣದ ಆರೋಪ ಬಂದಾಗ ತನಿಖೆಗೆ ಒಳಪಡಿಸಿ ತನ್ನ ಬದ್ಧತೆಯನ್ನು ಉಳಿಸಿದೆ ಮಾತ್ರವಲ್ಲ ಯಾವುದೇ ಹಗರಣ ನಡೆದಿಲ್ಲ ಎಂದು ಸಾಬೀತು ಪಡಿಸಿದೆ. ಜನ ಲೋಕಪಾಲ ಮಸೂದೆಯನ್ನು ತರುತ್ತೇನೆಂದ ಮೋದಿ ತನ್ನ ಅಧಿಕಾರದ ಅವಧಿಯಲ್ಲಿ ಅದನ್ನು ಜಾರಿಗೆ ತರಲಿಲ್ಲ. ಹಗರಣದ ಆರೋಪ ಬಂದಾಗ ತನಿಖೆಗೆ ಒಪ್ಪಿಸದ ಈ ಮೋದಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದನ್ನು ಸಾಬೀತು ಮಾಡಿದೆ’ ಎಂದರು.

‘ಈಗಾಗಲೇ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಚುನಾವಣಾ ತಯಾರಿಯ ಕುರಿತು ಚಿಂತನ ಮಂಥನ ನಡೆಸಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಹಲವಾರು ಮಂದಿ ಇದ್ದರೂ ಯಾರಿಗೇ ಪಕ್ಷ ಅವಕಾಶ ನೀಡಿದರೂ ಒಗ್ಗಟ್ಟಾಗಿ ದುಡಿಯಲು ಬದ್ಧರಾಗಿದ್ದಾರೆ. ಇನ್ನು 2-3 ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದೇವೆ. ರಾಷ್ಟ್ರ ನಾಯಕರು ಬಂದಾಗ ಮಾತ್ರ ದೊಡ್ಡ ಸಮಾವೇಶ ನಡೆಸುತ್ತೇವೆಯೇ ಹೊರತು ಉಳಿದಂತೆ ಸಾಮಾನ್ಯ ಸಭೆಗಳ ಮೂಲಕ ಪ್ರಚಾರ ಕಾರ್ಯ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಯಲ್ಲಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗಿದ್ದು ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ’ ಎಂದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮಾತನಾಡಿ, ಬಿಜೆಪಿ ಕಳೆದ ಲೋಕಸಭಾ ಚುನಾವಣಾ ಸಂದರ್ಭ ಹೇಳಿದ ಯಾವೊಂದು ಕಾರ್ಯವನ್ನು ಮಾಡಿಲ್ಲ.  ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲು ನರೇಂದ್ರ ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ದೇಶದ ರಕ್ಷಣೆಯ ವಿಚಾರದಲ್ಲಿ ತಾವೇ ಶ್ರೇಷ್ಠ ಎನ್ನುವ ಬಿಜೆಪಿಗರು ರಫೇಲ್ ಹಗರಣದ ಮೂಲಕ ದುಡ್ಡು ತಿನ್ನುವ ನೀಚ ಕಾರ್ಯ ಮಾಡಿದ್ದಾರೆ. ಸೈನಿಕರ ಸಾವನ್ನು ರಾಜಕೀಯ ಲಾಭಕ್ಕೆ ಬಳಸುವ ಬಿಜೆಪಿಗರು ಪಾಕಿಸ್ಥಾನದ ಮೇಲೆ ತಾವೇ ದಾಳಿ ಮಾಡಿದಂತೆ ಮಾತನಾಡುತ್ತಿರುವುದು ದೇಶದ ಸೈನಿಕರಿಗೆ ಮಾಡುತ್ತಿರುವ ಅವಮಾನವಾಗಿದೆ. ಹುತಾತ್ಮ ಯೋಧರ ಹೆಸರಲ್ಲಿ ಮತಯಾಚನೆ ಮಾಡುತ್ತಿರುವುದು ದೇಶ ವಿರೋಧಿ ಕೃತ್ಯ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಈಗಾಗಲೇ ದೂರು ನೀಡಲಾಗಿದೆ. ಬಿಜೆಪಿಗರು ಅಂಬಾನಿಯ ಉದ್ಧಾರವನ್ನು ಬಯಸುತ್ತಾರೆಯೇ ಹೊರತು ದೇಶದ ಉದ್ಧಾರವನ್ನಲ್ಲ’ ಎಂದರು. ‘ಈ ಜಿಲ್ಲೆಯ ಸಂಸದ ಕಳೆದ 10 ವರ್ಷದಲ್ಲಿ ತಂದಿರುವ ಅನುದಾನ ಯಾವುದು ಎಂದು ಸಾಬೀತುಪಡಿಸಲಿ. ಜನರ ಮುಂದೆ ಮುಕ್ತ ಚರ್ಚೆಯಾಗಲಿ. ಇಡೀ ದೇಶದಲ್ಲಿ ಓರ್ವ ನಿಷ್ಕ್ರೀಯ ಸಂಸದನಿದ್ದರೆ ದ.ಕ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್’ ಆಗಿದ್ದಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ರಾಜಶೇಖರ ಅಜ್ರಿ, ಜಿ.ಪಂ.ಸದಸ್ಯ ಶಾಹುಲ್ ಹಮೀದ್, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News