ಚಾಯ್‌ವಾಲಾಗಳನ್ನು ಮರೆತು ಚೌಕಿದಾರರೊಂದಿಗೆ ಮೋದಿ: ಕಪಿಲ್ ಸಿಬಲ್
ಹೊಸದಿಲ್ಲಿ, ಮಾ. 24: ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಯ್‌ವಾಲಾಗಳ ಗೆಳೆತನವನ್ನು ಮರೆತು ಈಗ ಕಾವಲುಗಾರರ (ಚೌಕಿದಾರ್) ಜೊತೆಗೆ ಸೇರಿಕೊಂಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವ್ಯಂಗ್ಯವಾಡಿದ್ದಾರೆ.
ರಾಜಕೀಯ ಲಾಭಕ್ಕಾಗಿ ನರೇಂದ್ರ ಮೋದಿ ಇನ್ನು ಬೇರೆ ಯಾರೊಟ್ಟಿಗಾದರೂ ಕಾಣಿಸಿಕೊಳ್ಳಬಹುದು. ಬಾಲಕೋಟ್‌ನಲ್ಲಿ ಭಾರತದ ಸೇನೆ ನಡೆಸಿದ ವಾಯುದಾಳಿಯನ್ನು ಮೋದಿ ರಾಜಕೀಯಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗುರ್‌ದಾಸ್‌ಪುರ್, ಪಠಾಣ್‌ಕೋಟ್, ಉರಿ, ಬಾರಾಮುಲ್ಲಾ, ಪುಲ್ವಾಮ ಮತ್ತಿತರೆಡೆ ಈ ಹಿಂದೆಯೂ ಉಗ್ರರ ದಾಳಿ ನಡೆದಿದ್ದವು. ಆಗ ಈ ಕಾವಲುಗಾರ ನಿದ್ರಿಸುತ್ತಿದ್ದನೇ? ಮೇ ಭೀ ಚೌಕೀದಾರ್ ಘೋಷಣೆ ಆಗ ಏನಾಗಿತ್ತು ಎಂದು ಅವರು ಪ್ರಶ್ನಿಸಿದರು.
ಚಹಾ ಮಾರಾಟ ಮಾಡುವವರ ಬಗೆಗಿನ ವಿಷಯಗಳನ್ನೆಲ್ಲ ಪ್ರಧಾನಮಂತ್ರಿ ಮರೆತಿದ್ದಾರೆ. ಈಗ ಕಾವಲುಗಾರರನ್ನು ನೆನಪಿಸುತ್ತಿದ್ದಾರೆ. ಇನ್ನೊಮ್ಮೆ ಕಾವಲುಗಾರರನ್ನು ಮರೆತು ಬೇರೊಬ್ಬರು ಬರುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.