ಕಾಂಗ್ರೆಸ್ ಸೇರ್ಪಡೆಯನ್ನು ನಿರಾಕರಿಸಿದ ಸಪ್ನಾ ಚೌಧರಿ
ಹೊಸದಿಲ್ಲಿ, ಮಾ.24:ಹರ್ಯಾಣದ ನೃತ್ಯಗಾರ್ತಿ ಮತ್ತು ಗಾಯಕಿ ಸಪ್ನಾ ಚೌಧರಿ ತಾನು ಕಾಂಗ್ರೆಸ್ ಪಕ್ಷ ಸೇರಿಲ್ಲ ಮತ್ತು ಪಕ್ಷದ ಸದಸ್ಯತ್ವದ ಅರ್ಜಿಗೆ ಸಹಿ ಹಾಕಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಶನಿವಾರ ಸಪ್ನಾ ಚೌಧರಿ ಕಾಂಗ್ರೆಸ್ ಪಕ್ಷ ಸೇರಿರುವುದನ್ನು ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಮಥುರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಪಕ್ಷದ ಮೂಲಗಳು ದೃಢಪಡಿಸಿತ್ತು.
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೊಂದಿಗಿದ್ದ ತನ್ನ ಫೋಟೋ ತುಂಬಾ ಹಳೆಯದ್ದು, ತಾನು ಯಾವುದೇ ಪಕ್ಷದ ಪರ ಪ್ರಚಾರ ಕೈಗೊಳ್ಳುವುದಿಲ್ಲ ಎಂದು ಸಪ್ನಾ ಸ್ಪಷ್ಟಪಡಿಸಿದ್ದಾರೆ.
“ ನಾನು ಕಲಾವಿದೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಜನರನ್ನು ಭೇಟಿಯಾಗುತ್ತೇನೆ. ಆದರೆ ಯಾವುದೇ ರಾಜಕೀಯ ಪಕ್ಷವನ್ನು ಸೇರಿಲ್ಲ. ನಾನು ರಾಜಕೀಯ ಪಕ್ಷ ಸೇರುವುದಿದ್ದರೆ ಬಹಿರಂಗವಾಗಿ ಸೇರುತ್ತೇನೆ '’ ಎಂದು ಹೇಳಿದ್ದಾರೆ.
ಸಪ್ನಾ ಚೌಧರಿ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಶನಿವಾರ ಮಾಹಿತಿ ನೀಡಿದ್ದರು. ಸ್ವಪ್ನಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕಾ ಗಾಂಧಿ ವಾಡ್ರಾ ಸ್ವಾಗತಿಸುತ್ತಿರುವ ಫೋಟೊವನ್ನು ಟ್ವೀಟ್ ಮಾಡಿದ್ದರು.
ಮಥುರಾದ ಸಂಸದೆ ಹೇಮಾಮಾಲಿನಿ ವಿರುದ್ಧ ಚೌಧರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಸಪ್ನಾ ಚೌಧರಿ ಇದೀಗ ಕಾಂಗ್ರೆಸ್ ಗೆ ಉಲ್ಟಾ ಹೊಡೆದಿದ್ದಾರೆ.