×
Ad

ಸಜ್ಜಾದ್ ಖಾನ್‌ನನ್ನು ಫೆಬ್ರವರಿಯಲ್ಲೇ ಬಂಧಿಸಲಾಗಿತ್ತು: ಭಯೋತ್ಪಾದನೆ ಆರೋಪದಲ್ಲಿ ಬಂಧಿತನ ಕುಟುಂಬದ ಆರೋಪ

Update: 2019-03-24 22:12 IST

ಶ್ರೀನಗರ, ಮಾ. 24: ಜೈಶೆ ಮುಹಮ್ಮದ್‌ನ ಸಕ್ರಿಯ ಕಾರ್ಯಕರ್ತನೆಂದು ಹೇಳಲಾದ ಸಜ್ಜಾದ್ ಖಾನ್‌ನನ್ನು ಪೊಲೀಸರು ಮಾರ್ಚ್ 21ರಂದು ಬಂಧಿಸಿಲ್ಲ. ಬದಲಾಗಿ ಒಂದು ತಿಂಗಳಿಗಿಂತ ಮೊದಲೇ ಬಂದಿಸಿದ್ದರು ಎಂದು ಸಜ್ಜಾದ್ ಖಾನ್‌ನ ಕುಟುಂಬ ಆರೋಪಿಸಿದೆ.

ಪುಲ್ವಾಮ ದಾಳಿಯ ಪ್ರಧಾನ ಸಂಚುಕೋರ ಮುದಸ್ಸಿರ್‌ನ ನಿಕಟ ವರ್ತಿ ಎಂದು ಹೇಳಲಾಗುತ್ತಿರುವ ಖಾನ್‌ನನ್ನು ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ಬಂಧಿಸಿದ ಒಂದು ದಿನದ ಬಳಿಕ ಖಾನ್‌ನ ಕುಟುಂಬ ಈ ಆರೋಪ ಮಾಡಿದೆ.

ಕಾಶ್ಮೀರದ 6 ಮಂದಿ ಶಾಲು ವ್ಯಾಪಾರಿಗಳೊಂದಿಗೆ ಖಾನ್‌ನನ್ನು ಬಂಧಿಸಲಾಗಿದೆ. ಆತ ಅಮಾಯಕ. ಜೀವನ ಸಾಗಿಸಲು ಶಾಲು ಮಾರಾಟ ಮಾಡುತ್ತಿದ್ದ ಎಂದು ಖಾನ್‌ನ ಕುಟುಂಬ ಹೇಳಿದೆ.

ಜಿಲ್ಲೆಯ ಇತರರೊಂದಿಗೆ ಖಾನ್ ಕೆಲಸ ಹುಡುಕಿಕೊಂಡು ದಿಲ್ಲಿಗೆ ಹೋಗಿದ್ದ. ಖಾನ್‌ನನ್ನು ಅವರೆಲ್ಲರೊಂದಿಗೆ ಪೊಲೀಸರು ಬಂಧಿಸಿದ್ದಾರೆ ಎಂದು ಟ್ರಾಲ್ ಪುಲ್ವಾಮದ ಹಾಂಡೂರಾ ಗ್ರಾಮದಲ್ಲಿ ವಾಸಿಸುತ್ತಿರುವ ಖಾನ್‌ನ ಕುಟುಂಬ ಹೇಳಿದೆ.

‘‘ನನ್ನ ಪುತ್ರನನ್ನು ಇತರ ಯುವಕರೊಂದಿಗೆ ಫೆಬ್ರವರಿ 16ರಂದು ಬಂಧಿಸಲಾಗಿದೆ. ಮಾರ್ಚ್ 21ರಂದು ಬಂಧಿಸಲಾಗಿದೆ ಎಂಬುದು ಆಧಾರ ರಹಿತ. ಅಂದು ನಾನು ದಿಲ್ಲಿಗೆ ತೆರಳಿದ್ದೆ ಹಾಗೂ ಅಧಿಕಾರಿಗಳನ್ನು ಭೇಟಿಯಾಗಿದ್ದೆ. ಅಲ್ಲಿ 24 ದಿನಗಳ ಕಾಲ ತಂಗಿದ್ದೆ. ನನ್ನ ಪುತ್ರನನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದರು. ಆದರೆ, ಅವರು ನನ್ನ ಪುತ್ರನನ್ನು ಭೇಟಿಯಾಗುವುದಕ್ಕಾಗಲಿ, ಮಾತನಾಡುವುದಕ್ಕಾಗಲಿ ಅವಕಾಶ ನೀಡಲಿಲ್ಲ’’ ಎಂದು ಖಾನ್‌ನ ತಂದೆ ಗುಲಾಂ ನಬಿ ಖಾನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News