ಲೋಕಸಭಾ ಚುನಾವಣೆ: 26 ಲಕ್ಷ ಬಾಟಲಿ ಅಳಿಸಲಾಗದ ಶಾಯಿ ಖರೀದಿಸಲಿರುವ ಚು.ಆಯೋಗ
Update: 2019-03-24 23:15 IST
ಹೊಸದಿಲ್ಲಿ,ಮಾ.24: ಲೋಕಸಭಾ ಚುನಾವಣೆಯಲ್ಲಿ ಬಳಸಲು ಚುನಾವಣಾ ಆಯೋಗ 26 ಲಕ್ಷ ಅಳಿಸಲಾಗದ ಶಾಯಿ ಖರೀದಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಶಾಯಿಯ ಒಟ್ಟು ಮೌಲ್ಯ 33 ಕೋಟಿ ರೂ. ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ 21.5 ಲಕ್ಷ ಬಾಟಲಿ ಅಳಿಸಲಾಗದ ಶಾಯಿಯನ್ನು ಖರೀದಿಸಿತ್ತು. ಸರಕಾರಿ ಸ್ವಾಮ್ಯದ ಮೈಸೂರು ಪೈಂಟ್ಸ್ ಆ್ಯಂಡ್ ವಾರ್ನಿಶ್ ಲಿ. ಚುನಾವಣಾ ಆಯೋಗಕ್ಕೆ ಅಳಿಸಲಾಗದ ಶಾಯಿ ತಯಾರಿಸಿ ಕೊಡುವ ಏಕಮಾತ್ರ ದೃಢೀಕೃತ ಸಂಸ್ಥೆಯಾಗಿದೆ.
ಈ ಕುರಿತು ಮಾತನಾಡಿದ ಮೈಸೂರು ಪೈಂಟ್ಸ್ ಆ್ಯಂಡ್ ವಾರ್ನಿಶ್ ಲಿ.ನ ವ್ಯವಸ್ಥಾಪನಾ ನಿರ್ದೇಶಕ ಚಂದ್ರಶೇಖರ ದೊಡ್ಡಮನಿ, ತಲಾ 10 ಮಿಲಿ ಲೀ.ನ 26 ಲಕ್ಷ ಬಾಟಲಿಗೆ ಚುನಾವಣಾ ಆಯೋಗ ಈಗಾಗಲೇ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಎಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ.