×
Ad

ಮೃತ ಗ್ಯಾಂಗ್ ಸ್ಟರ್ ತಾಯಿಗೆ ಮೂರು ಠಾಣೆಗಳ ದಿನಚರಿಯ ಪ್ರತಿ ನೀಡಲು ನಿರಾಕರಣೆ

Update: 2019-03-24 23:18 IST

ಜೈಪುರ,ಮಾ.24: 2017ರಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ಕುಖ್ಯಾತ ಪಾತಕಿ ಆನಂದ್‌ಪಾಲ್‌ನ ತಾಯಿಗೆ ನಗೌರ್ ಜಿಲ್ಲೆಯ ಸನ್‌ವ್ರದ್, ಲಡ್ನು ಮತ್ತು ದೀಡ್ವನ ಪೊಲೀಸ್ ಠಾಣೆಯ ದೈನಂದಿನ ದಿನಚರಿಯ ಪ್ರತಿಗಳನ್ನು ನೀಡಲು ರಾಜಸ್ಥಾನದ ಮಾಹಿತಿ ಆಯೋಗ ನಿರಾಕರಿಸಿದೆ.

ಮೂರು ಠಾಣೆಗಳ ಜೂನ್ 20, 2017ರಿಂದ ಜುಲೈ 20, 2017ರವರೆಗಿನ ದಿನಚರಿಯ ಪ್ರತಿಗಳನ್ನು ಆನಂದ್‌ಪಾಲ್ ತಾಯಿ ನಿರ್ಮಲ್ ಕನ್ವರ್ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದರು. ಆದರೆ ಈ ಪ್ರತಿಗಳನ್ನು ನೀಡಲು ನಗೌರ್ ಪೊಲೀಸರು ನಿರಾಕರಿಸಿದ್ದಾರೆ.

ನಂತರ ಆಕೆ ಮಾಹಿತಿ ಆಯೋಗಕ್ಕೆ ದೂರು ನೀಡಿದರೂ ಆಯೋಗವೂ ನಗೌರ್ ಪೊಲೀಸರ ನಿರ್ಧಾರವನ್ನು ಎತ್ತಿಹಿಡಿದಿದೆ. ಸದ್ಯ ಆನಂದ್‌ಪಾಲ್ ಪ್ರಕರಣದ ತನಿಖೆ ನಡೆಯುತ್ತಿದ್ದು ಸಾಕ್ಷಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟು ಪೊಲೀಸ್ ಠಾಣೆಗಳ ದೈನಂದಿನ ದಿನಚರಿಯ ಪ್ರತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿದೆ.

ಜೂನ್ 24, 2017ರಲ್ಲಿ ಚುರು ಜಿಲ್ಲೆಯಲ್ಲಿ ಆನಂದ್‌ಪಾಲ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ. ಈ ಘಟನೆಯ ನಂತರ ನಗೌರ್‌ನಲ್ಲಿ ಏಳು ದಿನಗಳ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿ ದಂಗೆಗಳಿಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News