ಬಿಜೆಪಿ ನಡೆಯ ಬಗ್ಗೆ ಅಡ್ವಾಣಿ ಅಸಮಧಾನ: ಮೂಲಗಳು

Update: 2019-03-24 17:49 GMT

ಹೊಸದಿಲ್ಲಿ, ಮಾ.24: ಬಿಜೆಪಿಯ ಹಿರಿಯ ಮುಖಂಡ ಎಲ್‌ಕೆ ಅಡ್ವಾಣಿಗೆ ಈ ಬಾರಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿರುವ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ, ಹಿರಿಯ ಮುಖಂಡರನ್ನು ಪಕ್ಷ ನಡೆಸುತ್ತಿರುವ ರೀತಿ ಸರಿಯಲ್ಲ ಎಂದು ಅಡ್ವಾಣಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕದಿರುವುದಕ್ಕೆ ಬೇಸರವಿಲ್ಲ. ಆದರೆ ಯಾವ ರೀತಿ ಅಗೌರವಯುತವಾಗಿ ನಿರಾಕರಿಸಲಾಯಿತು ಎಂಬುದು ನಿಜಕ್ಕೂ ಬೇಸರದ ವಿಷಯ. ಹೀಗೆ ಮಾಡುವ ಮುನ್ನ ಪಕ್ಷದ ಹಿರಿಯ ಮುಖಂಡರು ಅವರನ್ನು ಸಂಪರ್ಕಿಸಿ ಚರ್ಚಿಸಬೇಕಿತ್ತು ಎಂದು ಅಡ್ವಾಣಿಯ ಪರಮಾಪ್ತ ಮುಖಂಡರು ಹೇಳಿದ್ದಾರೆ.

ಗುಜರಾತ್‌ನ ಗಾಂಧೀನಗರ ಕ್ಷೇತ್ರದಲ್ಲಿ ಸತತ ಆರು ಬಾರಿ ಗೆದ್ದಿರುವ ಅಡ್ವಾಣಿಗೆ ಈ ಬಾರಿ ಟಿಕೆಟ್ ನಿರಾಕರಿಸಿ ಅವರ ಸ್ಥಾನದಲ್ಲಿ ಪಕ್ಷಾಧ್ಯಕ್ಷ ಅಮಿತ್ ಶಾರನ್ನು ಕಣಕ್ಕೆ ಇಳಿಸಲಾಗಿದೆ.

   75 ವರ್ಷ ಮೀರಿದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುತ್ತಿಲ್ಲ. ಇದರಂತೆ ಬಿಜೆಪಿಯಲ್ಲಿ ಸುಮಾರು 10ಕ್ಕೂ ಹೆಚ್ಚು ನಾಯಕರು ಈ ವ್ಯಾಪ್ತಿಗೆ ಬರುತ್ತಾರೆ. ಲೋಕಸಭಾ ಚುನಾವಣೆ ಘೋಷಣೆಯಾಗುವ ಕೆಲ ದಿನಗಳ ಮೊದಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ಹಿರಿಯ ಮುಖಂಡರನ್ನು ಸಂಪರ್ಕಿಸಿ, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವಂತೆ ಅವರನ್ನು ಕೇಳಿಕೊಂಡಿದ್ದರು. ಆದರೆ 91 ವರ್ಷದ ಅಡ್ವಾಣಿ ಈ ಮಾತಿಗೆ ಸಮ್ಮತಿಸಿರಲಿಲ್ಲ. ಸೌಜನ್ಯಕ್ಕಾದರೂ ಬಿಜೆಪಿಯ ಹಿರಿಯ ಮುಖಂಡರು ತನ್ನನ್ನು ಭೇಟಿಯಾಗಿ ಈ ವಿಷಯ ಹೇಳಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.

ಇತರ ಹಿರಿಯ ಮುಖಂಡರಾದ ಶಾಂತ ಕುಮಾರ್, ಹುಕುಮ್‌ದೇವ್ ಯಾದವ್, ಕಲ್ರಾಜ್ ಮಿಶ್ರ, ಭಗತ್ ಸಿಂಗ್ ಕೋಶಿಯಾರಿ, ಬಿಸಿ ಖಂಡೂರಿ ಮತ್ತು ಕರಿಯ ಮುಂಡರನ್ನೂ ರಾಮಲಾಲ್ ಸಂಪರ್ಕಿಸಿದ್ದರು. ಇವರಲ್ಲಿ ಶಾಂತ ಕುಮಾರ್, ಕಲ್ರಾಜ್ ಮಿಶ್ರ ಮಾತ್ರ ಸಮ್ಮತಿಸಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಉಳಿದವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

75 ವರ್ಷದ ಸುಮಿತ್ರಾ ಮಹಾಜನ್(ಲೋಕಸಭಾ ಸ್ಪೀಕರ್) ಅವರಿಗೆ ತವರು ರಾಜ್ಯ ಮಧ್ಯಪ್ರದೇಶದಲ್ಲಿ ಟಿಕೆಟ್ ದೊರಕುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ ಮತ್ತೋರ್ವ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಪ್ರತಿನಿಧಿಸುತ್ತಿರುವ ಕಾನ್ಪುರ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಇನ್ನೂ ಘೋಷಿಸಿಲ್ಲ.

2014ರ ಲೋಕಸಭಾ ಚುನಾವಣೆಗೂ ಮುನ್ನ , ನರೇಂದ್ರ ಮೋದಿಯನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಕ್ಕೆ ಅಡ್ವಾಣಿ ತೀವ್ರ ವಿರೋಧ ಸೂಚಿಸಿದ್ದರು. ಚುನಾವಣೆ ಮುಗಿದು ಎರಡು ತಿಂಗಳೊಳಗೆ ಅಡ್ವಾಣಿ, ವಾಜಪೇಯಿ ಹಾಗೂ ಮುರಳಿ ಮನೋಹರ ಜೋಶಿಯನ್ನು ಪಕ್ಷದ ಉನ್ನತ ಸಮಿತಿಯಾಗಿರುವ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿತ್ತು.

  ಬಳಿಕ ಅಡ್ವಾಣಿ, ಅರುಣ್ ಶೌರಿ, ಯಶವಂತ ಸಿನ್ಹ ಮತ್ತು ಮುರಳಿ ಮನೋಹರ ಜೋಶಿಯನ್ನೊಳಗೊಂಡ ಮಾರ್ಗದರ್ಶಕ ಮಂಡಳಿಯನ್ನು ರಚಿಸಿ, ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಮಂಡಳಿಯ ಸಲಹೆ ಪಡೆಯಲು ನಿರ್ಧರಿಸಲಾಗಿತ್ತು. ಆದರೆ ಈ ಮಂಡಳಿ ಒಂದು ಬಾರಿಯೂ ಸಭೆ ಸೇರಿಲ್ಲ ಮತ್ತು ಒಮ್ಮೆಯೂ ಮಂಡಳಿಯ ಸಲಹೆಯನ್ನು ಕೇಳಿಲ್ಲ. ಮುಂದಿನ ವರ್ಷ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲೂ ಅಡ್ವಾಣಿಯ ಗೈರುಹಾಜರಿ ಎದ್ದು ಕಾಣಿಸುತ್ತಿತ್ತು. ಕ್ರಮೇಣ ಇತರ ಕಾರ್ಯಕ್ರಮಗಳಿಗೂ ಅಡ್ವಾಣಿಯನ್ನು ಆಹ್ವಾನಿಸುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News