ದ.ಕ.: ಯುವ ಅಭ್ಯರ್ಥಿ ಕೈ ಹಿಡಿದ ಕಾಂಗ್ರೆಸ್

Update: 2019-03-24 19:01 GMT

ಮಂಗಳೂರು, ಮಾ. 24: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕೊನೆಗೂ ಅಂತಿಮವಾಗಿದೆ.

ಕಾಂಗ್ರೆಸ್‌ನ ಯುವ ನಾಯಕ 34ರ ಹರೆಯದ ಮಿಥುನ್ ರೈ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಕಳೆದ ರಾತ್ರಿ ಕರ್ನಾಟಕದ 18 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕಾಂಗ್ರೆಸ್‌ನಿಂದ ಯುವ ನಾಯಕ ಮಿಥುನ್ ರೈ ನಡುವೆ ನೇರ ಸ್ಪರ್ಧೆ ಖಾತರಿಯಾಗಿದೆ.

ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರದಲ್ಲಿರುವುದರಿಂದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ದ.ಕ. ಜೆಡಿಎಸ್ ಈಗಾಗಲೇ ಬಹಿರಂಗವಾಗಿ ಘೋಷಿಸಿಕೊಂಡಿದೆ. ಆದರೆ, ಈ ನಡುವೆ ಎಸ್‌ಡಿಪಿಐನಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದ್ದು, ಕುತೂಹಲ ಕೆರಳಿಸಿದೆ.

1991ರಿಂದ ಬಿಜೆಪಿಯ ಭದ್ರ ಕೋಟೆಯಾಗಿರುವ ಮಂಗಳೂರು ಕ್ಷೇತ್ರವನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಯೂ ಗೊಂದಲಕ್ಕೆ ಕಾರಣವಾಗಿತ್ತು.

ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದ ಹಲವಾರು ಘಟಾನುಘಟಿ ನಾಯಕರ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ ದ.ಕ. ಕ್ಷೇತ್ರದಲ್ಲಿ ಯುವ ನಾಯಕನಿಗೆ ಟಿಕೆಟ್ ನೀಡುವ ಮೂಲಕ ದ.ಕ. ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯನ್ನು ರಂಗೇರಿಸಿದೆ.

ದ.ಕ. ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಬಹುತೇಕವಾಗಿ ಬಿಲ್ಲವ ಸಮುದಾಯದ ನಾಯಕನಿಗೆ ಕಾಂಗ್ರೆಸ್ ಪಕ್ಷದಿಂದ ಆದ್ಯತೆ ನೀಡಲಾಗುತ್ತಿತ್ತು. ಇದೀಗ ಕಾಂಗ್ರೆಸ್ ಪಕ್ಷವು ತನ್ನ ಹಳೆ ಪ್ರತೀತಿಯನ್ನು ಮುರಿದು ಈ ಬಾರಿ ಬದಲಾವಣೆಯ ಮಾರ್ಗ ಬಯಸಿ ಹೊಸ ಮುಖ, ಬಂಟ ಸಮುದಾಯದ ಯುವ ನಾಯಕ ಮಿಥುನ್ ರೈಗೆ ಟಿಕೆಟ್ ನೀಡಿದೆ. ಪಕ್ಷದ ಹೈಕಮಾಂಡ್‌ನ ಈ ನಿರ್ಧಾರ ದ.ಕ. ಜಿಲ್ಲೆಯಲ್ಲಿ ರಾಜಕೀಯದ ಬದಲಾವಣೆಯ ಗಾಳಿ ಬೀಸಲು ಕಾರಣವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ 1951ರಿಂದ ಕಳೆದ 16 ಚುನಾವಣೆಗಳಲ್ಲಿ ಸತತ 9 ಬಾರಿ ಕಾಂಗ್ರೆಸ್ ಹಾಗೂ ಸತತ 7 ಬಾರಿ ಬಿಜೆಪಿ ಜಯಗಳಿಸಿರುವ ದಾಖಲೆ ಇದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹೊರತಾಗಿ ಯಾವುದೇ ಇತರ ಪಕ್ಷಗಳು ಇಲ್ಲಿ ಜಯಗಳಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಮತ್ತು ಬಿಜೆಪಿಯಿಂದ ವಿ. ಧನಂಜಯ ಕುಮಾರ್ (ಇತ್ತೀಚೆಗಷ್ಟೆ ವಿಧಿವಶ) ತಲಾ 4 ಬಾರಿ ಗೆಲುವು ಸಾಧಿಸಿದ ಇತಿಹಾಸವೂ ಜಿಲ್ಲೆಯದ್ದು.

ವಿದ್ಯಾರ್ಥಿ ನಾಯಕತ್ವದಿಂದ ಲೋಕಸಭೆ ಅಭ್ಯರ್ಥಿವರೆಗೆ...

ಸತತ ಮೂರು ಅವಧಿಗೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಿಥುನ್ ರೈ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದವರು. ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡಿರುವ ಇವರು ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಅಧ್ಯಕ್ಷರಾಗಿ ನೇತೃತ್ವ ನೀಡಿದ್ದರು.

ಯುವ ಕಾಂಗ್ರೆಸ್ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಇವರು 2018ರ ವಿಧಾನಸಭೆ ಚುನಾವಣೆಯಲ್ಲಿ ಮೂಡುಬಿದಿರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಎರಡು ವರ್ಷಗಳ ಕಾಲ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟಿಸಿದ್ದರು. ಆದರೆ, ಕೊನೇ ಗಳಿಗೆಯಲ್ಲಿ ಮತ್ತೆ ಅಭಯಚಂದ್ರ ಜೈನ್ ಕಣಕ್ಕಿಳಿದ ಕಾರಣ ಟಿಕೆಟ್ ವಂಚಿತರಾಗಿದ್ದರು. ಆ ಬಳಿಕ ಲೋಕಸಭೆ ಚುನಾವಣೆಗೆ ಟಿಕೆಟ್ ಪಡೆಯಲು ಯತ್ನ ನಡೆಸಿದ್ದರು. ದಸರಾ ಸಂದರ್ಭ ಪಿಲಿ ನಲಿಕೆ, ಕಂಬಳ ಆಯೋಜನೆ ಮೂಲಕ ಸಾರ್ವಜನಿಕ ವಲಯದಲ್ಲೂ ತಮ್ಮನ್ನು ಸಕ್ರಿಯವಾಗಿಸಿಕೊಂಡವರು.

ಕಡೆಂಞ ತ್ಯಾಂಪಣ್ಣ ರೈ ಮೊಮ್ಮಗ

ಪಾರಂಪರಿಕ ವೈದ್ಯ ಪಂಡಿತನಾಗಿ ಕರಾವಳಿಯಲ್ಲಿ ಅಪಾರ ಹೆಸರು ಮಾಡಿದ್ದ ಕಡೆಂಞ ತ್ಯಾಂಪಣ್ಣ ರೈಯ ಮೊಮ್ಮಗ ಈ ಮಿಥುನ್ ರೈ. ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಇವರ ತಂದೆ, ಸಹೋದರರು ಎಲ್ಲರೂ ವೈದ್ಯಕೀಯ ವೃತ್ತಿಯಲ್ಲಿ ಹೆಸರು ಮಾಡಿದ್ದರೆ, ಮಿಥುನ್ ರೈ ಮಾತ್ರ ತಮ್ಮ ಕಾಲೇಜು ದಿಸೆಯಿಂದಲೇ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡವರು. ಈ ನಾಯಕತ್ವವೇ ಅವರನ್ನು ರಾಜಕೀಯಕ್ಕೆ ಸೆಳೆದಿದ್ದು, ಇಂದು ಕಾಂಗ್ರೆಸ್ ಪಕ್ಷದ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ದ.ಕ. ಜಿಲ್ಲೆಯ ಯುವ ಕಾಂಗ್ರೆಸ್ ಇತಿಹಾಸದಲ್ಲೇ ಕಳೆದ ಒಂಬತ್ತು ವರ್ಷಗಳಿಂದ ಚುನಾವಣೆಯ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷಗಾದಿಯನ್ನು ಪಡೆದವರು ಮಿಥುನ್ ರೈ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News