ಕಾಂಗ್ರೆಸ್ ಮುಕ್ತ ಮಾಡಲು ಈ ಜನ್ಮದಲ್ಲಿ ಯಾರಿಗೂ ಸಾಧ್ಯವಿಲ್ಲ: ಸಚಿವೆ ಜಯಾಮಾಲ

Update: 2019-03-25 15:10 GMT

ಉಡುಪಿ, ಮಾ. 25: ಕಾಂಗ್ರೆಸ್ ಮುಕ್ತ ಮಾಡಲು ಈ ಜನ್ಮದಲ್ಲಿ ಯಾರಿಗೂ ಸಾಧ್ಯವಿಲ್ಲ. ಈ ಬಗ್ಗೆ ನಾನು ಚಾಲೆಂಜ್ ಮಾಡುತ್ತೇನೆ. ಕಾಂಗ್ರೆಸ್ ಜನರ ನಡುವೆ ಹುಟ್ಟಿ ಬಂದ ಪಕ್ಷ. ಅದಕ್ಕೆ ಅಸ್ತಿತ್ವ, ಸಂಕಲ್ಪ ಇದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಾಮಾಲ ಹೇಳಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವ ರಾಜ್ ನಾಮಪತ್ರ ಸಲ್ಲಿಸಿದ ಬಳಿಕ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಕ್ತವಾಗಿದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಚಿಹ್ನೆ ಬಗ್ಗೆ ಹೇಳುವ ಶೋಭಾ ಕರಂದ್ಲಾಜೆ ಗೆದ್ದು ಬಂದ ನಂತರ ಐದು ವರ್ಷ ಎಲ್ಲಿದ್ದರು. ಈ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ. ಅವರಿಗೆ ಗೋ ಬ್ಯಾಕ್ ಹೇಳಿರುವುದು ಅವರದೇ ಪಕ್ಷದವರು ಹೊರತು ನಾವಲ್ಲ. ಯಾವುದೇ ಕೆಲಸ ಮಾಡದ ಶೋಭಾ, ಕೇಂದ್ರದಲ್ಲಿರುವ ಮೋದಿಯನ್ನು ತೋರಿ ಸುತ್ತಿದ್ದಾರೆ. ಅವರಲ್ಲಿ ಯಾವುದೇ ಸತ್ವ ಇಲ್ಲ. ಅದಕ್ಕಾಗಿ ಮೋದಿಯ ಹೆಸರು ಹೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಮಹಿಳೆ ಎಂಬ ಕಾರಣಕ್ಕೆ ಶೋಭಾರನ್ನು ಟೀಕೆ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಜಯಾಮಾಲ, ನಾವು ಮಹಿಳೆಯಲ್ಲವೇ. ಶೋಭಾ ಅವರಿಗೆ ಯಾರು ಕೂಡ ಟೀಕೆ ಮಾಡಿಲ್ಲ. ಚುನಾವಣೆ ಸಂದರ್ಭ ದಲ್ಲಿ ಟೀಕೆ ಎಂಬುದು ಸಹಜ. ಅದನ್ನು ಎದುರಿಸುವ ಶಕ್ತಿ ನಮಗೆ ಬರಬೇಕು. ಶೋಭಾ ಅವರಿಗೆ ಸೋಲಿನ ಚಿಂತೆ ಕಾಡುತ್ತಿದೆ ಎಂದು ಅವರು ತಿಳಿಸಿದರು.

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮಧ್ಯೆ ಯಾವುದೇ ಗೊಂದಲ ಇಲ್ಲ. ನಾವು ಒಮ್ಮತದ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಚುನಾ ವಣೆಗೆ ನಿಲ್ಲಿಸುದ್ದೇವೆ ಎಂದು ಜಯಾಮಾಲ ಹೇಳಿದರು.

ಕಾಂಗ್ರೆಸ್ ಯಾರಿಗೂ ಮೋಸ ಮಾಡಿಲ್ಲ: ಜಾರ್ಜ್

ಕಾಂಗ್ರೆಸ್ ಯಾರಿಗೂ ಮೋಸ ಮಾಡಿಲ್ಲ. ಈ ಮೊದಲು ಮದ್ದೆಗೌಡರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಪಕ್ಷವೇ. ಈಗ ನಾವು ಸಮ್ಮಿಶ್ರ ಸರಕಾರ ದೊಂದಿಗೆ ಅಧಿಕಾರ ನಡೆಸುತ್ತಿರುವುದರಿಂದ ಆ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿರುವ ಬಹುತೇಕ ನಾಯಕರು ಹಿಂದೂಗಳು. ನಾವು ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಸೇರಿದಂತೆ ಎಲ್ಲರ ಪರವಾಗಿದ್ದೇವೆ. ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದೇ ನಮ್ಮ ಏಕೈಕ ಗುರಿಯಾಗಿದೆ. ಹಾಗಾಗಿ ನಾವು ಮೈತ್ರಿ ಮಾಡಿಕೊಂಡು ಸ್ಪರ್ಧೆ ವಾಡುತ್ತಿದ್ದೇವೆ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News