×
Ad

ಪಂಜಾಬ್ ಗೆ ರೋಚಕ ಜಯ

Update: 2019-03-25 23:46 IST

ಜೈಪುರ,ಮಾ.25: ಆರಂಭಿಕ ಆಟಗಾರ ಕ್ರಿಸ್ ಗೇಲ್ ಅಬ್ಬರದ ಬ್ಯಾಟಿಂಗ್ ಬೆಂಬಲದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ನಾಲ್ಕನೇ ಐಪಿಎಲ್ ಪಂದ್ಯದಲ್ಲಿ 14 ರನ್‌ಗಳ ರೋಚಕ ಜಯ ದಾಖಲಿಸಿ ಶುಭಾರಂಭ ಮಾಡಿದೆ. ಸೋಮವಾರ ಗೆಲ್ಲಲು 185 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 170 ರನ್ ಗಳಿಸಿದೆ.

ಇನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್(69) ಹಾಗೂ ಅಜಿಂಕ್ಯ ರಹಾನೆ(27) ಮೊದಲ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸುವುದರೊಂದಿಗೆ ಉತ್ತಮ ಆರಂಭ ನೀಡಿದರು. 8.1ನೇ ಓವರ್‌ನಲ್ಲಿ ರಹಾನೆ ಔಟಾದರು. ಆಗ ಬಟ್ಲರ್‌ಗೆ ಜೊತೆಯಾದ ಸ್ಯಾಮ್ಸನ್ 2ನೇ ವಿಕೆಟ್‌ಗೆ 30 ರನ್ ಸೇರಿಸಿದರು.

ಸ್ಮಿತ್(20) ಜೊತೆ ಕೈಜೋಡಿಸಿದ ಸ್ಯಾಮ್ಸನ್(30) 3ನೇ ವಿಕೆಟ್‌ಗೆ 40 ರನ್ ಜೊತೆಯಾಟ ನಡೆಸಿದರು. ಸ್ಮಿತ್, ಸ್ಯಾಮ್ಸನ್ ಔಟಾದ ಬಳಿಕ ರಾಜಸ್ಥಾನ ಕುಸಿತದ ಹಾದಿ ಹಿಡಿಯಿತು.

ಸ್ಯಾಮ್ ಕರನ್(2-52),ಮುಜೀಬ್‌ವುರ್ರಹ್ಮಾನ್(2-31) ಹಾಗೂ ರಾಜ್‌ಪೂತ್(2-32) ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಟಾಸ್ ಜಯಿಸಿದ ರಾಜಸ್ಥಾನ ನಾಯಕ ಅಜಿಂಕ್ಯ ರಹಾನೆ ಪಂಜಾಬ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಕೆಎಲ್ ರಾಹುಲ್(4)ರನ್ನು ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಕಳೆದುಕೊಂಡ ಪಂಜಾಬ್ ಕಳಪೆ ಆರಂಭ ಪಡೆದಿತ್ತು. ಈ ಹಂತದಲ್ಲಿ ಜೊತೆಯಾದ ಗೇಲ್(79, 47 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ಮಾಯಾಂಕ್ ಅಗರ್ವಾಲ್(22, 24 ಎಸೆತ, 1 ಬೌಂಡರಿ, 2 ಸಿಕ್ಸರ್)2ನೇ ವಿಕೆಟ್‌ಗೆ 56 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

33 ಎಸೆತಗಳಲ್ಲಿ 50 ರನ್ ಪೂರೈಸಿದ ಗೇಲ್ 3ನೇ ವಿಕೆಟ್‌ಗೆ ಯುವ ದಾಂಡಿಗ ಸರ್ಫರಾಝ್ ಖಾನ್ ಅವರೊಂದಿಗೆ 84 ರನ್ ಜೊತೆಯಾಟ ನಡೆಸಿದರು. 16ನೇ ಓವರ್‌ನಲ್ಲಿ ಸ್ಟೋಕ್ಸ್ ಅವರು ಗೇಲ್ ಅಬ್ಬರಕ್ಕೆ ತೆರೆ ಎಳೆದರು.

ಔಟಾಗದೆ 46(29 ಎಸೆತ, 6 ಬೌಂಡರಿ, 1 ಸಿಕ್ಸರ್)ರನ್ ಗಳಿಸಿದ ಖಾನ್ ಪಂಜಾಬ್ ಮೊತ್ತವನ್ನು 184ಕ್ಕೆ ತಲುಪಿಸಿದರು. ರಾಜಸ್ಥಾನದ ಪರ ವೇಗದ ಬೌಲರ್ ಬೆನ್ ಸ್ಟೋಕ್ಸ್(2-48) ಎರಡು ವಿಕೆಟ್‌ಪಡೆದರು.

► ಸಂಕ್ಷಿಪ್ತ ಸ್ಕೋರ್

ಪಂಜಾಬ್: 20 ಓವರ್‌ಗಳಲ್ಲಿ 184/4

(ಕ್ರಿಸ್ ಗೇಲ್ 79, ಮಾಯಾಂಕ್ 22, ಸರ್ಫರಾಝ್ ಖಾನ್ 35, ಸ್ಟೋಕ್ಸ್ 2-48)

ರಾಜಸ್ಥಾನ: 20 ಓವರ್‌ಗಳಲ್ಲಿ 170/9

(ಬಟ್ಲರ್ 69, ಸ್ಯಾಮ್ಸನ್ 30, ಸ್ಮಿತ್ 20, ರಹಾನೆ 27, ಕರನ್ 2-52, ರಹ್ಮಾನ್ 2-31, ರಾಜ್‌ಪೂತ್ 2-32)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News