×
Ad

ಜೊಕೊವಿಕ್ ಮೂರನೇ ಸುತ್ತಿಗೆ ಲಗ್ಗೆ

Update: 2019-03-25 23:58 IST

ಮಿಯಾಮಿ, ಮಾ.25: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ರವಿವಾರ ಸುಮಾರು 2 ಗಂಟೆಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ಫೆಡೆರಿಕೊ ಡೆಲ್ಬೊನಿಸ್‌ರಿಂದ ತೀವ್ರ ಸವಾಲು ಎದುರಿಸಿದ ಜೊಕೊವಿಕ್ ಅಂತಿಮವಾಗಿ 7-5, 4-6, 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. 83ನೇ ರ್ಯಾಂಕಿನ ಡೆಲ್ಬೊನಿಸ್ ವಿರುದ್ಧ ಜಯ ಸಾಧಿಸುವುದರೊಂದಿಗೆ ಜೊಕೊವಿಕ್ ಅರ್ಜೆಂಟೀನ ಆಟಗಾರರ ವಿರುದ್ಧ ತಮ್ಮ ಉತ್ತಮ ದಾಖಲೆ ಮುಂದುವರಿಸಿದರು. 2007ರಲ್ಲಿ ಅರ್ಜೆಂಟೀನದ ಮಾರ್ಟಿನ್ ಡೆಲ್ ಪೊಟ್ರೊ ಅವರು ಜೊಕೊವಿಕ್‌ರನ್ನು ಮಣಿಸಿದ್ದರು. ಸರ್ಬಿಯ ಆಟಗಾರ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ 22ನೇ ಶ್ರೇಯಾಂಕದ ರೊಬರ್ಟೊ ಬೌಟಿಸ್ಟಾ ಅಗುಟ್‌ರನ್ನು ಎದುರಿಸಲಿದ್ದಾರೆ. ಅಗುಟ್ ಇಟಲಿಯ ಫ್ಯಾಬಿಯೊ ಫೊಗ್ನಿನಿ ಅವರನ್ನು 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಾನ್ ಇಸ್ನೆರ್ ಸ್ಪೇನ್‌ನ ಅಲ್ಬರ್ಟ್ ರಾಮೊಸ್-ವಿನೊಲಸ್ ವಿರುದ್ಧ 7-5,7-6(6) ಸೆಟ್‌ಗಳಿಂದ ಜಯ ಸಾಧಿಸಿದರು. 7ನೇ ಶ್ರೇಯಾಂಕದ ಇಸ್ನೆರ್ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ 19ನೇ ಶ್ರೇಯಾಂಕದ ಕೈಲ್ ಎಡ್ಮಂಡ್‌ರನ್ನು ಎದುರಿಸಲಿದ್ದಾರೆ. ಎಡ್ಮಂಡ್ ಕೆನಡಾದ 12ನೇ ಶ್ರೇಯಾಂಕದ ಮಿಲೊಸ್ ರಾವೊನಿಕ್‌ರನ್ನು 6-4, 6-4 ಸೆಟ್‌ಗಳಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News