ಕಾನೂನಾತ್ಮಕ ಅಡೆತಡೆಯಿಲ್ಲದಿದ್ದರೆ ಅಭಿನಂದನ್ ಉಡುಪಿ ಭೇಟಿಗೆ ಅವಕಾಶ: ನಿರ್ಮಲಾ ಸೀತಾರಾಮನ್ ಭರವಸೆ

Update: 2019-03-26 06:15 GMT

ಉಡುಪಿ, ಮಾ.26: ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಕಾನೂನಾತ್ಮಕ ಅಡೆ ತಡೆ ಇಲ್ಲದಿದ್ದರೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಕಳುಹಿಸಿಕೊಡಲಾಗುವುದು. ಈ ಸಂಬಂಧ ರಕ್ಷಣಾ ಇಲಾಖೆಗೆ ಒಂದು ಪತ್ರ ಬರೆಯುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇಂದು ಉಡುಪಿ ಶ್ರೀಕೃಷ್ಣ ಭೇಟಿಯ ಸಂದರ್ಭದಲ್ಲಿ ಅಭಿನಂದನ್ ಅವರನ್ನು ಗೌರವಾರ್ಪಣೆ ಸಲ್ಲಿಸುವ ಉದ್ದೇಶದಿಂದ ಉಡುಪಿಗೆ ಕಳುಹಿಸಿಕೊಡುವಂತೆ ಸ್ವಾಮೀಜಿಯ ಬೇಡಿಕೆಗೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು.

ವಿಂಗ್ ಕಮಾಂಡರ್ ಅಭಿನಂದನ್ ಪರಾಕ್ರಮ ನಮಗೆ ಬಹಳ ಮೆಚ್ಚುಗೆಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಅಭಿನಂದನ್‌ಗೆ ಗೌರವಾರ್ಪಣೆ ಮಾಡಬೇಕೆಂಬುದು ನಮ್ಮ ಆಶಯ. ಆದುದರಿಂದ ರಕ್ಷಣಾ ಇಲಾಖೆ ಮೂಲಕ ಅವರು ಬರುವಂತೆ ಅವಕಾಶ ಮಾಡಿಕೊಡಿ ಎಂದು ಸ್ವಾಮೀಜಿ ಕೋರಿದರು.

ಆಧ್ಯಾತ್ಮಿಕ ಶ್ರೀಗಳಲ್ಲಿ ನನ್ನ ಲೌಕಿಕ ವಿನಂತಿ. ಈ ಬಾರಿ ಕೃಷ್ಣನಲ್ಲಿ ದೇಶಕ್ಕಾಗಿ ಪ್ರಾರ್ಥಿಸಬೇಕು. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು. ದೇಶ ಸುರಕ್ಷಿತರ ಕೈಯಲ್ಲಿರುವಂತೆ ದೇವರಲ್ಲಿ ಪ್ರಾರ್ಥಿಸಬೇಕು. ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತೆ ಆಶೀರ್ವದಿಸಬೇಕು ಎಂದು ಸಚಿವೆ ಸ್ವಾಮೀಜಿಯವರಲ್ಲಿ ಕೋರಿದರು. ಉಡುಪಿ ಜೊತೆ ನನಗೆ ಒಂದನೇ ವರ್ಷದಿಂದ ನಂಟು ಇದೆ. ಕೊಲ್ಲೂರು, ಕೃಷ್ಣಮಠದ ಜೊತೆ ನಿರಂತರ ಸಂಪರ್ಕವಿದೆ. ಮಠದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಪರ್ಯಾಯ ಪಲಿಮಾರು ಸ್ವಾಮೀಜಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಉದಯ ಕುಮಾರ್ ಶೆಟ್ಟಿ, ಶ್ರೀಶ ನಾಯಕ್, ಭಾರತಿ ಶೆಟ್ಟಿ, ಮಠದ ಪಿಆರ್‌ಓ ಶ್ರೀಶ ಭಟ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News