ನಾಪತ್ತೆಯಾದ ಮೀನುಗಾರರ ಮನೆಗಳಿಗೆ ರಕ್ಷಣಾ ಸಚಿವೆ ಭೇಟಿ

Update: 2019-03-26 08:07 GMT

ಮಲ್ಪೆ, ಮಾ.26: ಕಳೆದ ಡಿ.13ರಂದು ಆಳಸಮುದ್ರ ಮೀನುಗಾರಿಕೆಗೆ ತೆರಳಿ ಎರಡು ದಿನಗಳ ಬಳಿಕ ಗೋವಾ-ಮಹಾರಾಷ್ಟ್ರ ಗಡಿ ಭಾಗದ ಸಮುದ್ರದಲ್ಲಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನ ಮಾಲಕ ಚಂದ್ರಶೇಖರ್ ಕೋಟ್ಯಾನ್ ಹಾಗೂ ತಾಂಡೇಲ ದಾಮೋದರ ಸಾಲ್ಯಾನ್ ಅವರ ಮಲ್ಪೆ ಸಮೀಪದ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ಮನೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು.

ಏಳು ಮೀನುಗಾರರೊಂದಿಗೆ ಸುವರ್ಣ ತ್ರಿಭುಜ ಬೋಟು ನಾಪತ್ತೆಯಾದ ಬಳಿಕ ಮಹಾರಾಷ್ಟ್ರ ಸರಕಾರ, ನೌಕಾಪಡೆಯ ಮೂಲಕ ನಾವು ಬೋಟು ಹಾಗೂ ಮೀನುಗಾರರ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದು, ಪತ್ತೆ ಕಾರ್ಯ ಈಗಲೂ ಜಾರಿಯಲ್ಲಿದೆ ಎಂದು ಸಚಿವೆ ಕುಟುಂಬದ ಸದಸ್ಯರಿಗೆ ತಿಳಿಸಿದರು.

ಮೊದಲು ಸುವರ್ಣ ತ್ರಿಭುಜ ಬೋಟಿನ ಮಾಲಕರಾದ ಚಂದ್ರಶೇಖರ ಕೋಟ್ಯಾನ್(40)ರ ಮನೆಗೆ ತೆರಳಿದ ಸಚಿವೆ, ಮನೆಯಲ್ಲಿದ್ದ ಕೋಟ್ಯಾನ್‌ರ ಪತ್ನಿ ಶ್ಯಾಮಲಾ ಹಾಗೂ ತಾಯಿಯವರನ್ನು ಸಂತೈಸಿದರು. ಸಚಿವೆ ಅವರನ್ನು ನೋಡಿದ ಶ್ಯಾಮಲಾ ಹಾಗೂ ಬಂಧುಗಳ ಕಣ್ಣೀರ ಕಟ್ಟೆ ಒಡೆಯಿತು. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶ್ಯಾಮಲಾರನ್ನು ಸಚಿವೆ ಸಂತೈಸಿದರು. ಅವರ ಪರವಾಗಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ನಾವು ಮೀನುಗಾರರ ಪತ್ತೆಗೆ ಎಲ್ಲಾ ಪ್ರಯತ್ನ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ದಾಮೋದರ ಸಾಲ್ಯಾನ್(40)ರ ಮನೆಗೆ ತೆರಳಿದ ಸಚಿವೆ, ಅನಾರೋಗ್ಯದಿಂದ ನರಳುತ್ತಿರುವ ತಂದೆ ಸುವರ್ಣ ತಿಂಗಳಾಯ ಹಾಗೂ ತಾಯಿ ಸೀತಾ ಸಾಲ್ಯಾನ್ ಸಮೀಪ ಕುಳಿತು ಅವರ ಮಾತುಗಳನ್ನು ಆಲಿಸಿದರು. ತಾಯಿ ಕೇವಲ ಕಣ್ಣಲ್ಲಿ ಇಳಿಯುತ್ತಿದ್ದ ನೀರನ್ನು ತಡೆ ಹಿಡಿಯುವ ಪ್ರಯತ್ನ ನಡೆಸುತ್ತಿದ್ದರೆ, ತಂದೆ ಇಳಿಯುತ್ತಿದ್ದ ಕಣ್ಣೀರ ನಡುನಡುವೆ ತುಳುವಿನಲ್ಲಿ ಮಾತನಾಡಿದರು.

‘ನಮಗೆ ಮನೆ ಮಗ ಹಿಂದಿರುಗಿ ಬರಬೇಕು. ಬೇರೆ ಏನೂ ಹೇಳಲು ಇಲ್ಲ. ಆತನ ದಾರಿಯನ್ನೇ ನಾವು ಎದುರು ನೋಡುತಿದ್ದೇವೆ.... ಆತನನ್ನು ಮತ್ತೊಮ್ಮೆ ಈ ಕಣ್ಣಲ್ಲಿ ನೋಡುವ ಭಾಗ್ಯವನ್ನು ಕರುಣಿಸಿ. ಅಷ್ಟು ಸಾಕು. ಆತನಿಗಾಗಿ ನಾವು ಏನು ಮಾಡಲೂ ಸಾಧ್ಯವಿಲ್ಲ. ಏನಾದರೂ ಮಾಡುವುದಿದ್ದರೆ ಅದು ನಿಮ್ಮಿಂದ ಮಾತ್ರ ಸಾಧ್ಯ.’ ಎನ್ನುತ್ತಾ ಸುವರ್ಣ ತಿಂಗಳಾಯ ಕಣ್ಣೀರು ಒರೆಸಿಕೊಂಡರು.

ಇಲ್ಲೂ ಸಚಿವೆಯ ಪರವಾಗಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಇಲ್ಲಿಗೆ ಬರುವ ಮೊದಲು ಸಚಿವರು ಮೀನುಗಾರ ನಿಯೋಗದೊಂದಿಗೆ ಮಾತನಾಡಿದ್ದಾರೆ. ಅವರು ನೀಡಿದ ಎಲ್ಲಾ ಸಲಹೆಯನ್ನೂ ಒಪ್ಪಿಕೊಂಡಿದ್ದಾರೆ. ಮೀನುಗಾರರು ಹೇಳಿದ ಕಡೆಗೆ ನೌಕಾಪಡೆಯೊಂದಿಗೆ ಜಂಟಿಯಾಗಿ ಹೋಗಿ ಹುಡುಕಲು ಸಹ ಒಪ್ಪಿದ್ದಾರೆ’ ಎಂದರು.

‘ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಾಧ್ಯಮ ದವರ ಮುಂದೆ ಬಹಿರಂಗವಾಗಿ ಹೆಚ್ಚು ಮಾತನಾಡುವಂತಿಲ್ಲ. ಮನೆಯವರ ಎಲ್ಲಾ ಬೇಡಿಕೆಗಳನ್ನು ಒಪ್ಪಿದ್ದಾರೆ. ನಾಪತ್ತೆಯಾದ ಮೀನುಗಾರರ ಕುಟುಂಬಿಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಸಹ ಒಪ್ಪಿದ್ದಾರೆ’ ಎಂದು ಶೋಭಾ ನುಡಿದರು.

ಸಚಿವರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಬಿಜೆಪಿ ನಾಯಕರು, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಸೇರಿದಂತೆ ಮೀನುಗಾರ ಮುಖಂಡರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News