‘ವಾರ್ತಾಭಾರತಿ’ ಅಂಕಣಕಾರ ಸನತ್ ಕುಮಾರ್ ಬೆಳಗಲಿಗೆ ಕೊಲೆ ಬೆದರಿಕೆ: ದೂರು ದಾಖಲು

Update: 2019-03-26 16:43 GMT
ಸನತ್ ಕುಮಾರ್ ಬೆಳಗಲಿ

ಮಂಗಳೂರು, ಮಾ.26: 'ವಾರ್ತಾಭಾರತಿ' ಪತ್ರಿಕೆಯ ಅಂಕಣಕಾರ, ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ ಆರೋಪಿಯ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ರಘುನಂದನ್ ರಘು ಹೆಸರಿನ ಫೇಸ್‌ಬುಕ್ ಖಾತೆಯಿಂದ ಸನತ್ ಕುಮಾರ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈತನ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸ್ ಆಯುಕ್ತರು ಈ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚಿಸಿದ್ದಾರೆ.

ವಾರ್ತಾಭಾರತಿಯಲ್ಲಿ ಪ್ರತಿ ಸೋಮವಾರ ಸನತ್ ಕುಮಾರ್ ಬೆಳಗಲಿ ಬರೆಯುತ್ತಿರುವ 'ಪ್ರಚಲಿತ' ಅಂಕಣದಲ್ಲಿ ಮಾ.25ರಂದು 'ಅಪಾಯದ ಅಂಚಿಗೆ ಬಂದು ನಿಂತ ಭಾರತ' ಎಂಬ ಬರಹ ಪ್ರಕಟವಾಗಿತ್ತು. ವಾರ್ತಾಭಾರತಿಯ ವೆಬ್‌ಸೈಟ್ www.varthabharati.inನಲ್ಲೂ ಪ್ರಕಟವಾಗಿದ್ದ ಈ ಅಂಕಣ ಬರಹಕ್ಕೆ ಸಂಬಂಧಿಸಿ ಆರೋಪಿ ರಘುನಂದನ್ ರಘು, ''ನಿಮ್ಮಂತಹ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಂದರೂ ಯಾವ ಪಾಪನೂ ಬರುವುದಿಲ್ಲ'' ಎಂದು ಕೊಲೆ ಬೆದರಿಕೆಯ ಕಮೆಂಟ್ ಹಾಕಿದ್ದಾನೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸ್ ಆಯುಕ್ತರು ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಬೆದರಿಕೆಗಳಿಗೆ ಯಾವುದೇ ಸಂದರ್ಭದಲ್ಲಿಯೂ ಜಗ್ಗುವುದಿಲ್ಲ

‘ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲ್ಲಿ ಅಭಿವ್ಯಕ್ತಿ ಸ್ವಾತಂತ್ರ ದಮನಗೊಳಿಸಲು ಬೆದರಿಕೆಗಳು ಹಾಕಲಾಗುತ್ತಿದೆ. ಚರ್ಚೆ- ಸಂವಾದಕ್ಕೆ ಸಿದ್ಧರಿಲ್ಲ, ಜನರು ಕೊಲ್ಲಲು ಬರುತ್ತಿದ್ದಾರೆ. ಈಗಾಗಲೇ ಪತ್ರಕರ್ತೆ ಗೌರಿಲಂಕೇಶ್, ಸಂಶೋಧಕ ಕಲಬುರ್ಗಿ ಸೇರಿದಂತೆ ನಾಲ್ಕೈದು ಮಂದಿಯನ್ನು ಹತ್ಯೆ ಮಾಡಲಾಗಿದೆ. ಹೀಗಾಗಿ ಕೊಲೆ ಬೆದರಿಕೆಗಳನ್ನು ಹಗುರವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಇದು ಅತ್ಯಂತ ಅಪಾಯಕಾರಿ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಬಂದಿದೆ. ಮೋದಿಯನ್ನು ವಿರೋಧಿಸುವವರು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಇಂಥ ಬೆದರಿಕೆಗಳಿಗೆ ಯಾವುದೇ ಸಂದರ್ಭದಲ್ಲಿಯೂ ಜಗ್ಗುವುದಿಲ್ಲ. ನಮ್ಮ ನಿಲುವುಗಳನ್ನು ಬಹಳ ಧೈರ್ಯದಿಂದಲೇ ಪ್ರತಿಪಾದನೆ ಮಾಡುತ್ತೇವೆ’

-ಸನತ್‌ಕುಮಾರ್ ಬೆಳಗಲಿ, ಹಿರಿಯ ಪತ್ರಕರ್ತ, ಅಂಕಣಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News