​ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ

Update: 2019-03-26 11:53 GMT

ಉಡುಪಿ, ಮಾ.26: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಂಗಳವಾರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಜೊತೆ ಆಗಮಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡನೆ ಬಾರಿಗೆ ನಾಮಪತ್ರವನ್ನು ಸಲ್ಲಿಸಿದರು.
ಈ ಮೊದಲು ಅವರು ಮಾ.22ರಂದು ಪ್ರಥಮ ಹಂತದಲ್ಲಿ ನಾಮಪತ್ರವನ್ನು ಸಲ್ಲಿಸಿದ್ದರು. ಇಂದು ಕಡಿಯಾಳಿಯಲ್ಲಿ ಹಮ್ಮಿಕೊಳ್ಳಲಾದ ವಿಜಯ ಸಂಕಲ್ಪ ಸಮಾವೇಶದ ಬಳಿಕ ಅವರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತ ರೊಂದಿಗೆ ತೆರಳಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶೋಭಾ ಜೊತೆ ಸಚಿವೆ ನಿರ್ಮಲ ಸೀತಾರಾಮನ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮೂಡಿಗೇರೆ ಶಾಸಕ ಕುಮಾರ ಸ್ವಾಮಿ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಹಾಜರಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಬಿಜೆಪಿ 23ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತದೆ. ಅದಕ್ಕೆ ರಾಜ್ಯದ ಜನತೆ ಆಶೀರ್ವಾದ ಮಾಡುವಂತೆ ಮನವಿ ಮಾಡುತ್ತೇನೆ. ಮುಂದೆ ಮೋದಿ ನೇತೃತ್ವದಲ್ಲಿ ಈ ಕ್ಷೇತ್ರದ ಸವೋತ್ತಮ ಅಭಿವೃದ್ಧಿಗೆ ನಾವು ಶ್ರಮಿಸಬೇಕಾಗಿದೆ. ಚುನಾವಣೆ ಎಂಬುದು ಯುದ್ಧ. ಅದನ್ನು ನಾವು ನಮ್ಮ ಕಾರ್ಯಕರ್ತರ ಸೈನ್ಯದ ಮೂಲಕ ಗೆಲ್ಲುತ್ತೇವೆ. ನಮ್ಮ ಜೊತೆ ಇರುವ ದೊಡ್ಡ ಕಾರ್ಯಕರ್ತರ ಸೈನ್ಯದ ಮೂಲಕ ಎದುರಾಳಿಯನ್ನು ಸೋಲಿಸುವುದು ನಮ್ಮ ಗುರಿ. ಈ ಬಾರಿ ಬಹಳ ದೊಡ್ಡ ಅಂತರದಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News