ಮಂಗಳೂರು ವಿವಿಯಲ್ಲಿ 'ಸಂಭ್ರಮ-2019' ಉದ್ಘಾಟನೆ

Update: 2019-03-26 12:00 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತು ಇದರ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ 'ಸಂಭ್ರಮ-2019’ ಇದರ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ನಟಿ ನೀತಾ ಅಶೋಕ್ ಅವರು, ನಾವು ಪರಿಶ್ರಮ ಹಾಗೂ ಕನಸಿನೊಂದಿಗೆ ಮುನ್ನಡೆದರೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಆದ್ದರಿಂದ ವಿದ್ಯಾರ್ಥಿಗಳು ಈಗಲೇ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಹೇಳಿದರು.

ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಸೇತು ಬಂಧು ಡಾ.ಗಿರೀಶ್ ಭಾರದ್ವಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದೇಹ, ಬಟ್ಟೆಯನ್ನು ನಾವು ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಹೃದಯವನ್ನು ಕೂಡಾ ಸ್ವಚ್ಚವಾಗಿಟ್ಟುಕೊಳ್ಳಬೇಕು. ನಾವು ಪ್ರಮುಖವಾಗಿ ನಮ್ಮ ಮನಸ್ಸನ್ನು ಸರಿಯಾಗಿ ಉಪಯೋಗ ಮಾಡುವುದನ್ನು ಕಲಿತುಕೊಳ್ಳಬೇಕು. ದೃಢವಾದ ವಿಶ್ವಾಸ ನಮ್ಮನ್ನು ಯಶಸ್ವಿ ಜೀವನದತ್ತ ಕೊಂಡೊಯ್ಯುತ್ತದೆ. ಜೊತೆಗೆ ನಮ್ಮ ಸಂಸ್ಕøತಿ, ಸಂಪ್ರದಾಯಗಳ ರಕ್ಷಣೆಯೊಂದಿಗೆ ಗುರುಹಿರಿಯರಿಗೆ ಗೌರವ ನೀಡುವ ಗುಣ ನಮ್ಮಲ್ಲಿ ಸದಾ ಇರಬೇಕು ಎಂದು ಅಭಿಪ್ರಾಯಪಟ್ಟರು. 

ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಯುವಜನೋತ್ಸವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಗೋವಿಂದಾಸ್ ಕಾಲೇಜು ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ತಂಡಗಳಿಗೆ ಮಂಗಳೂರು ವಿವಿ ವತಿಯಿಂದ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ಕುಲಸಚಿವರಾದ ಪ್ರೊ.ಎ.ಎಂ.ಖಾನ್, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕರಾದ ಪ್ರೊ.ಬಾರ್ಕೂರು ಉದಯ, ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾದ ವಿನುತಾ ಎಂ.ಎಸ್, ಉಪಾಧ್ಯಕ್ಷ ನಿತಿನ್ ಎ.ಎಂ, ಕಾರ್ಯದರ್ಶಿ ಅಭಿಷೇಕ್, ಸಹಕಾರ್ಯದರ್ಶಿ ಸುದೀಪ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಹರ್ಷಿತ್ ಪಿ.ಜಿ., ಸಹಸಾಂಸ್ಕೃತಿಕ ಕಾರ್ಯದರ್ಶಿ ನಿಧಿ ಎಚ್.ಸಿ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News