ಪ್ರಧಾನಿ ಮೋದಿ ಕ್ರಿಮಿನಲ್‌ಗಳಿಗೆ ‘ಚೌಕಿದಾರ್’: ಚಂದ್ರಬಾಬು ನಾಯ್ಡು

Update: 2019-03-27 15:40 GMT

ಕರ್ನೂಲ್(ಆಂ.ಪ್ರ),ಮಾ:27: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ಇಲ್ಲಿ ಟೀಕಾಪ್ರಹಾರ ನಡೆಸಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು,ಅವರು ಕ್ರಿಮಿನಲ್‌ಗಳ ಚೌಕಿದಾರನಾಗಿದ್ದಾರೆ ಎಂದರು. ಬಿಜೆಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಅನ್ನು ‘ಗಂಡ-ಹೆಂಡತಿ’ ಎಂದೂ ಬಣ್ಣಿಸಿದ ಅವರು, ಎರಡು ಪಕ್ಷಗಳ ಹೊರಗಿನವರಂತೆ ವರ್ತಿಸುತ್ತಿವೆ ಎಂದರು.

ಬಿಜೆಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿ ಗಂಡ-ಹೆಂಡತಿಯಿದ್ದಂತೆ,ಆದರೆ ಅವು ಹೊರಗಿನವರಿಗಾಗಿ ಕೆಲಸ ಮಾಡುತ್ತಿವೆ. ಈ ಮುಖವಾಡಗಳೇಕೆ?, ತಮಗೆ ಧೈರ್ಯವಿದ್ದರೆ ಮೋದಿ,ಕೆ.ಚಂದ್ರಶೇಖರ ರಾವ್ ಮತ್ತು ಜಗನ್ಮೋಹನ್ ರೆಡ್ಡಿ ಅವರು ಬಹಿರಂಗವಾಗಿ ಮುಂದೆ ಬರಬೇಕು. ರಾವ್ ಅವರು ರಾಜ್ಯವನ್ನು ನಾಶಗೊಳಿಸಲು ಪಿತೂರಿಯನ್ನು ನಡೆಸುತ್ತಿದ್ದಾರೆ. ಮೋದಿಯವರು ಕ್ರಿಮಿನಲ್‌ಗಳಿಗಾಗಿ ಚೌಕಿದಾರ್ ಆಗಿದ್ದಾರೆ ಎಂದು ನಂದ್ಯಾಲ್‌ನಲ್ಲಿ ರೋಡ್‌ಶೋ ಸಂದರ್ಭ ನಾಯ್ಡು ಟೀಕಿಸಿದರು.

ಇನ್ನಷ್ಟು ಆರೋಪಗಳನ್ನು ಮಾಡಿದ ಅವರು,ಮೋದಿ ಅವರು ಅಲ್ಪಸಂಖ್ಯಾತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸುರಕ್ಷತೆ ಬೇಕಿದ್ದರೆ ಮೋದಿ ಪರಾಭವಗೊಳ್ಳಲೇಬೇಕು. 2014ರಲ್ಲಿ ಜಗನ್ ಅಲ್ಪಸಂಖ್ಯಾತರ ಮತಗಳನ್ನು ಪಡೆದುಕೊಂಡಿದ್ದರು ಮತ್ತು ಬಳಿಕ ಮೋದಿ ಜೊತೆ ಕೈಜೋಡಿಸಿದ್ದರು ಎಂದರು.

ನಾವು ಅಲ್ಪಸಂಖ್ಯಾತರಿಗೆ ಬೆಂಬಲವಾಗಿ ನಿಲ್ಲುತ್ತ್ತೇವೆ. ಇಮಾಮ್‌ಗಳ ಗೌರವಧನವನ್ನು 5,000 ರೂ.ಗಳಿಂದ 10,000 ರೂ.ಗೆ ಮತ್ತು ಮೌಝಮ್‌ಗಳಿಗೆ 3,000 ರೂ.ಗಳಿಂದ 6,000 ರೂ.ಗಳಿಗೆ ಹೆಚ್ಚಿಸುತ್ತೇವೆ. ನಾವು ಉರ್ದು ವಿವಿಯನ್ನು ಸ್ಥಾಪಿಸಿದ್ದೇವೆ. ಹಜ್ ಹೌಸ್‌ಗಳನ್ನು,ಶಾದಿ ಖಾನಾಗಳನ್ನು ನಿರ್ಮಿಸಿದ್ದೇವೆ. ಮುಸ್ಲಿಂ ಅಲ್ಪಸಂಖ್ಯಾತರಿಗಾಗಿ 25 ಸನಿವಾಸ ಶಾಲೆಗಳನ್ನು ನಾವು ಸ್ಥಾಪಿಸುತ್ತೇವೆ ಎಂದೂ ನಾಯ್ಡು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News