ಲೋಕಸಭಾ ಚುನಾವಣೆ ವೇಳೆ ನಕಲಿ ಸುದ್ದಿಗೆ ಕಡಿವಾಣ: ಫೇಸ್‌ಬುಕ್

Update: 2019-03-27 15:56 GMT

ಹೊಸದಿಲ್ಲಿ, ಮಾ. 27: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಜಾಲ ತಾಣದಲ್ಲಿ ತಪ್ಪು ಮಾಹಿತಿ ಹರಡುವುದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಫೇಸ್‌ಬುಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಖಾತೆ ತಡೆಯುವುದರಿಂದ ಹಿಡಿದು ಸತ್ಯ ಪರಿಶೀಲನೆ ನಡೆಸುವ ಸಂಸ್ಥೆಯನ್ನು ನಿಯೋಜಿಸುವ ವರೆಗೆ ಫೇಸ್‌ಬುಕ್ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತದ ಚುನಾವಣೆಗೆ ಅತಿ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಹೇಳಿರುವ ಫೇಸ್‌ಬುಕ್‌ನ ನಾಗರಿಕ ಸಮನ್ವಯ ವಿಭಾಗಕ್ಕಿರುವ ಉತ್ಪಾದನಾ ನಿರ್ವಹಣೆಯ ನಿರ್ದೇಶಕ ಸಮಿಧ್ ಚಕ್ರವರ್ತಿ, ಲೋಕಸಭಾ ಚುನಾವಣೆಗೆ ಸಿದ್ಧವಾಗಲು ಕಂಪೆನಿ ಕಳೆದ ಎರಡು ವರ್ಷಗಳಿಂದ ಅಸಾಧಾರಣ ರೀತಿಯಲ್ಲಿ ಶ್ರಮ ವಹಿಸುತ್ತಿದೆ ಎಂದರು.

ಇಂಗ್ಲಿಶ್, ಹಿಂದಿ ಹಾಗೂ ಭಾರತದ ಇತರ ಕೆಲವು ಪ್ರಾದೇಶಿಕ ಭಾಷೆಯ ಮಾಹಿತಿಗಳನ್ನು ಪರಿಶೀಲಿಸಲು ಹಾಗೂ ತಪ್ಪು ಗುರುತಿಸಲು ಭಾರತೀಯ ಮಾಧ್ಯಮ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸುದ್ದಿ ತಪ್ಪು ಮಾಹಿತಿ ಒಳಗೊಂಡಿದೆ ಎಂದು ಸತ್ಯ ಪರಿಶೀಲನೆ ನಡೆಸುವ ಸಂಸ್ಥೆ ಗುರುತಿಸಿದ ಬಳಿಕ ಯಾವುದೇ ವೈಯುಕ್ತಿಕ ಬಳಕೆದಾರರ ಖಾತೆಯಲ್ಲಿ ಸುದ್ದಿ ಕಾಣಿಸಿಕೊಳ್ಳುವ ಸಂಖ್ಯೆಯು ಶೇ. 80ರಷ್ಟು ಕಡಿಮೆಯಾಗಿದೆ ಎಂದು ಚಕ್ರವರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News