ರಾಹುಲ್, ಪ್ರಿಯಾಂಕಾರನ್ನು ರಾವಣ, ಶೂರ್ಪನಖಿಗೆ ಹೋಲಿಸಿದ ಹಿರಿಯ ಬಿಜೆಪಿ ನಾಯಕ

Update: 2019-03-27 15:56 GMT

ಆಲ್ವಾರ್(ರಾಜಸ್ಥಾನ),ಮಾ.27: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಪೌರಾಣಿಕ ಪಾತ್ರಗಳಾದ ರಾವಣ ಮತ್ತು ಆತನ ಸೋದರಿ ಶೂರ್ಪನಖಿಗೆ ಹೋಲಿಸುವ ಮೂಲಕ ರಾಜಸ್ಥಾನ ಬಿಜೆಪಿ ಉಪಾಧ್ಯಕ್ಷ ಜ್ಞಾನದೇವ ಅಹುಜಾ ಅವರು ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಸತ್ಯಯುಗದಲ್ಲಿ ಹಿರಣ್ಯಕಶ್ಯಪ ಸಂಕಷ್ಟದಲ್ಲಿದ್ದಾಗ ತನ್ನ ಸೋದರಿ ಹೋಲಿಕಾಳ ನೆರವು ಪಡೆದಿದ್ದ. ತ್ರೇತಾಯುಗದಲ್ಲಿ ರಾವಣನು ಶೂರ್ಪನಖಿಯ ನೆರವನ್ನು ಕೋರಿದ್ದ. ಅದೇ ರೀತಿ ಈಗ ಕಲಿಯುಗದಲ್ಲಿ ಬಿಕ್ಕಟ್ಟಿನ ಸಮಯದಲ್ಲಿ ರಾಹುಲ್ ಅವರು ಸೋದರಿ ಪ್ರಿಯಾಂಕಾರಿಂದ ನೆರವು ಪಡೆಯುತ್ತಿದ್ದಾರೆ. ಹೋಲಿಕಾ ಮತ್ತು ಶೂರ್ಪನಖಿ ಅವರಿಗೆ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ರಾಜಕೀಯ ಎದುರಾಳಿಗಳ ವಿರುದ್ಧ ತನ್ನ ಅವಹೇಳನಕಾರಿ ಟೀಕೆಗಳು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಪ್ರಚೋದನಾಕಾರಿ ಭಾಷಣಗಳಿಗಾಗಿ ಕುಖ್ಯಾತಿ ಪಡೆದಿರುವ ಅಹುಜಾ ಆಲ್ವಾರ್ ಜಿಲ್ಲೆಯ ಮುಂಡಾದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.

ಕಾಂಗ್ರೆಸ್ ವಿರುದ್ಧ ದಾಳಿಯನ್ನು ಮುಂದುವರಿಸಿದ ಅವರು,ರಾಹುಲ್ ಮತ್ತು ಪ್ರಿಯಾಂಕಾ ಬಲವಂತದಿಂದ ದೇವಸ್ಥಾನಗಳಿಗೆ ಭೇಟಿ ನೀಡುವ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೃಷ್ಟಿಸಿದ್ದಾರೆ. ಸಂಪೂರ್ಣ ನಾಸ್ತಿಕವಾಗಿದ್ದ ಕುಟುಂಬವೀಗ ರಾಜಕೀಯಕ್ಕಾಗಿ ಆಸ್ತಿಕವಾಗುತ್ತಿದೆ,ಆದರೆ ಅವರ ಈ ತಂತ್ರಗಳಿಗೆ ಜನರು ಮರುಳಾಗುವುದಿಲ್ಲ ಎಂದರು.

ರಾಜಸ್ಥಾನದಲ್ಲಿ ಲೋಕಸಭಾ ಚುನಾವಣೆಗಾಗಿ ಮತದಾನ ಎ.29 ಮತ್ತು ಮೇ 6ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News