×
Ad

ಸರಕಾರಕ್ಕೆ ಸ್ಥಿರತೆ ಒದಗಿಸಲು ಬಿಜೆಪಿ ಸೇರಿದ ಎಂಜಿಪಿ ಶಾಸಕರು: ಸಾವಂತ್

Update: 2019-03-27 21:42 IST

ಪಣಜಿ, ಮಾ.27: ರಾಜ್ಯ ಸರಕಾರದ ಸ್ಥಿರತೆಗಾಗಿ ಎಂಜಿಪಿಯ ಇಬ್ಬರು ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ(ಎಂಜಿಪಿ)ಯ ಶಾಸಕರಾದ ಮನೋಹರ್ ಅಜ್‌ಗಾಂವ್‌ಕರ್ ಮತ್ತು ದೀಪಕ್ ಪವಾಸ್ಕರ್ ಬುಧವಾರ ಬೆಳಗ್ಗೆ ಸ್ಪೀಕರ್ ಮೈಕೆಲ್ ಲೋಬೊರನ್ನು ಭೇಟಿಮಾಡಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಪತ್ರವನ್ನು ಅವರಿಗೆ ಹಸ್ತಾಂತರಿಸಿದರು.

ಎಂಜಿಪಿಯ ಮೂರನೇ ಶಾಸಕ, ಉಪಮುಖ್ಯಮಂತ್ರಿಯಾಗಿದ್ದ ಸುದಿನ್ ಧವಳೀಕರ್ ಈ ಪತ್ರಕ್ಕೆ ಸಹಿ ಹಾಕಿಲ್ಲ.

ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಗೊಳ್ಳುವುದರೊಂದಿಗೆ 40 ಸದಸ್ಯರ ವಿಧಾನಸಭೆಯಲ್ಲಿ ಪಕ್ಷದ ಬಲ 14ಕ್ಕೇರಿದೆ. ಇಬ್ಬರು ಕೂಡಾ ಸರಕಾರಕ್ಕೆ ಸ್ಥಿರತೆ ಒದಗಿಸುವ ದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಾವಂತ್ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಎಂಜಿಪಿಯ ಹಿರಿಯ ಪ್ರಧಾನ ಕಾರ್ಯದರ್ಶಿ ಲಾವೂ ಮಮ್ಲತ್‌ದಾರ್‌ರನ್ನು ಇತ್ತೀಚೆಗೆ ಪಕ್ಷದ ಮುಖಂಡ ದೀಪಕ್ ಧವಳೀಕರ್ ಉಚ್ಛಾಟಿಸಿದ ಘಟನೆಯ ಬಳಿಕ ತನ್ನಲ್ಲಿ ಅಭದ್ರತೆಯ ಭಾವನೆ ಮೂಡಿತ್ತು ಎಂದು ಮನೋಹರ್ ಅಜ್‌ಗಾಂವ್‌ಕರ್ ಹೇಳಿದ್ದಾರೆ.

ಪಕ್ಷದ ಮುಖಂಡರನ್ನು ಟೀಕಿಸಿರುವ ಪಾವಸ್ಕರ್, ಕಳೆದ ಎರಡು ವರ್ಷದ ಶಾಸಕತ್ವದ ಅವಧಿಯಲ್ಲಿ ತನ್ನನ್ನು ಯಾವತ್ತೂ ಕೇಂದ್ರ ಸಮಿತಿ ಸಭೆಗೆ ಆಹ್ವಾನಿಸಿಲ್ಲ. ಧವಳೀಕರ್ ಸಹೋದರರು(ಸುದಿನ್ ಮತ್ತು ದೀಪಕ್) ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ನಿಧನರಾದ ಮನೋಹರ್ ಪಾರಿಕ್ಕರ್ ಮುಖ್ಯಮಂತ್ರಿಯಾಗಿದ್ದಾಗಲೇ ತಾವಿಬ್ಬರು ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಪಾರಿಕ್ಕರ್ ಅನಾರೋಗ್ಯದ ಕಾರಣ ಇದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಪಾವಸ್ಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News