ವಿಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನೋಟು ರದ್ದತಿ ಬಗ್ಗೆ ತನಿಖೆ: ಮಮತಾ ಬ್ಯಾನರ್ಜಿ ಭರವಸೆ

Update: 2019-03-27 16:43 GMT

ಕೋಲ್ಕತಾ,ಮಾ.27: ಕೇಂದ್ರದಲ್ಲಿ ವಿಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನೋಟು ರದ್ದತಿ ಬಗ್ಗೆ ತನಿಖೆ ನಡೆಸುತ್ತೇನೆ ಮತ್ತು ಯೋಜನಾ ಆಯೋಗವನ್ನು ಪುನಃಸ್ಥಾಪಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬುಧವಾರ ಭರವಸೆ ನೀಡಿದ್ದಾರೆ.

ಬುಧವಾರ ಪಕ್ಷದ ಪ್ರಾಣಾಳಿಕೆ ಬಿಡುಗಡೆ ಮಾಡಿದ ಬ್ಯಾನರ್ಜಿ, ನೂರು ದಿನಗಳ ಉದ್ಯೋಗ ಯೋಜನೆಯಲ್ಲಿ ದಿನಗಳನ್ನು 200ಕ್ಕೆ ಏರಿಸಲಾಗುವುದು ಮತ್ತು ವೇತನವನ್ನೂ ದುಪ್ಪಟ್ಟುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ನೋಟು ಅಮಾನ್ಯತೆ ಬಗ್ಗೆ ತನಿಖೆ ನಡೆಸುತ್ತೇವೆ. ನೀತಿ ಆಯೋಗದಿಂದ ಏನೂ ಉಪಯೋಗವಿಲ್ಲ. ಹಾಗಾಗಿ ಯೋಜನಾ ಆಯೋಗದ ಪುನಃ ಸ್ಥಾಪನೆ ಮಾಡುತ್ತೇವೆ. ಜೊತೆಗೆ ಜಿಎಸ್‌ಟಿಯನ್ನು ಪರಿಶೀಲಿಸುತ್ತೇವೆ. ಅದರಿಂದ ಜನರಿಗೆ ಉಪಕಾರವಿದೆ ಎಂದಾದರೆ ಅದನ್ನು ಯಥಾಸ್ಥಿತಿಯಲ್ಲಿ ಇಡಲಿದ್ದೇವೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

ಬಿಎಸ್‌ಎಫ್‌ನ ಮಾಜಿ ಪ್ರಧಾನ ನಿರ್ದೇಶಕ ಕೆ.ಕೆ ಶರ್ಮಾ ಅವರನ್ನು ಲೋಕಸಭಾ ಚುನಾವಣೆಯ ಸಮಯದಲ್ಲಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ವಿಶೇಷ ಪೊಲೀಸ್ ನಿರೀಕ್ಷಕರನ್ನಾಗಿ ನೇಮಿಸಿರುವುದನ್ನು ಬ್ಯಾನರ್ಜಿ ತೀವ್ರವಾಗಿ ವಿರೋಧಿಸಿದ್ದಾರೆ.

ಓರ್ವ ನಿವೃತ್ತ ಪೊಲೀಸ್ ಅಧಿಕಾರಿ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಯ ನಿಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಹೇಗೆ ಸಾಧ್ಯ? ಶಾರ್ಮಾ ತನ್ನ ಸೇವಾವಧಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅದೂ ಸಮವಸ್ತ್ರ ಧರಿಸಿಕೊಂಡು ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News