ಈಜುಪಟು ಮೈಕಲ್ ಫೆಲ್ಪ್ಸ್ ಕೈಯಲ್ಲಿ ಬ್ಯಾಟ್!
ಹೊಸದಿಲ್ಲಿ, ಮಾ.27: ಬ್ಯಾಟನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ ಹಾಗೂ ಸಿಕ್ಸರ್‌ಗೆ ಚಿಮ್ಮಿದ ಚೆಂಡನ್ನು ವೀಕ್ಷಿಸಿದ ಅಮೆರಿಕದ ಶ್ರೇಷ್ಠ ಈಜುಪಟು ಮೈಕಲ್ ಫೆಲ್ಪ್ಸ್, ತನ್ನ ಮೊದಲ ಭಾರತ ಪ್ರವಾಸದ ವೇಳೆ ಕ್ರಿಕೆಟ್ ನೋಡಿ ಆನಂದಪಟ್ಟರು. ಆದರೆ,ಈ ಕ್ರೀಡೆಯನ್ನು ಆಯ್ದುಕೊಳ್ಳಲು ಬಯಸಲಾರೆ ಎಂದರು.
ಓರ್ವ ಸಾರ್ವಕಾಲಿಕ ಶ್ರೇಷ್ಠ ಒಲಿಂಪಿಯನ್ ಫೆಲ್ಪ್ಸ್, ಬುಧವಾರ ಐಪಿಎಲ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರೊಂದಿಗೆ ಕ್ರಿಕೆಟ್ ಆಡಿ ಆನಂದಿಸಿದರು. ‘‘ಭಾರತದ ಕ್ರಿಕೆಟ್ ಪ್ರೇಕ್ಷಕರನ್ನು ನೋಡುವುದೇ ಒಂದು ಖುಷಿ. ನಿನ್ನೆ ಸಿಕ್ಸರ್ ಸಿಡಿಸುವುದನ್ನು ನೋಡಿ ಆನಂದಪಟ್ಟಿದ್ದೆ. ಕ್ರಿಕೆಟ್ ನನ್ನ ಮುಂದಿನ ಕ್ರೀಡೆ ಎಂದು ನಾನು ಯೋಚಿಸಿಲ್ಲ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟವನ್ನು ನೋಡಿ ಇಷ್ಟಪಟ್ಟೆ. ಇಂದು ನಾನು ಬ್ಯಾಟನ್ನು ಹೇಗೆ ಹಿಡಿದುಕೊಳ್ಳಬೇಕೆಂಬ ಬಗ್ಗೆ ಆಟಗಾರರ ಬಳಿ ಸಲಹೆ ಪಡೆದೆ. ಮುಂದಿನ ಬಾರಿ ಭಾರತಕ್ಕೆ ಭೇಟಿಯ ವೇಳೆ ಕ್ರಿಕೆಟ್‌ನ್ನು ಹೇಗೆ ಆಡಬೇಕೆಂಬ ಬಗ್ಗೆ ಚೆನ್ನಾಗಿ ತಯಾರಿ ನಡೆಸುವೆ’’ ಎಂದು ಹೇಳಿದರು.
ಫೆಲ್ಪ್ಸ್,2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ತಾನು ಸ್ಪರ್ಧಿಸಿದ್ದ ಎಲ್ಲ ಸ್ಪರ್ಧೆಗಳಲ್ಲಿ ಜಯ ಸಾಧಿಸಿ 8 ಚಿನ್ನದ ಪದಕಗಳನ್ನು ಜಯಿಸಿದ್ದರು. 2012ರ ಲಂಡನ್ ಒಲಿಂಪಿಕ್ ಗೇಮ್ಸ್‌ನಲ್ಲಿ ಎಲ್ಲ 4 ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದರು.