ಭಾರತ ಹಾಕಿಗೆ ಗ್ರಹಾಂ ರೇಡ್ ಕೋಚ್?
ಹೊಸದಿಲ್ಲಿ, ಮಾ.27: ಭಾರತ ಹಾಕಿ ತಂಡದ ಕೋಚ್ ಆಗಿ 2022ರ ವಿಶ್ವಕಪ್‌ವರೆಗೆ ಆಸ್ಟ್ರೇಲಿಯದ ಗ್ರಹಾಂ ರೇಡ್ ಅವರನ್ನು ನೇಮಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ಹಾಕಿ ಒಕ್ಕೂಟ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಈ ಕುರಿತು ಚಿಂತನೆ ನಡೆಸಿದ್ದು ಸುಮಾರು 3 ತಿಂಗಳುಗಳಿಂದ ಖಾಲಿಯಿರುವ ಹುದ್ದೆಯನ್ನು ತುಂಬುವ ಹಂತದಲ್ಲಿವೆ.
ಈ ಕುರಿತು ಹಾಕಿ ಇಂಡಿಯಾ ಹಾಗೂ ಸಾಯ್ ಮಂಗಳವಾರ ನಡೆಸಿದ ಸಭೆಯಲ್ಲಿ ರೇಡ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಹುದ್ದೆಗೆ ಮತ್ತೊಬ್ಬ ಆಸ್ಟ್ರೇಲಿಯದ ಅಭ್ಯರ್ಥಿ ಜಾಯ್ ಸ್ಟಾಸಿ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದರು. ಕ್ರೀಡಾ ಸಚಿವಾಲಯದ ಅನುಮತಿಗಾಗಿ ರೇಡ್ ಅವರ ಹೆಸರನ್ನು ಕಳುಹಿಸಲಾಗಿದೆ. ಸಚಿವಾಲಯದ ಮೂಲಗಳ ಪ್ರಕಾರ ಈ ವಾರಾಂತ್ಯದಲ್ಲಿ ಅಧಿಕೃತ ಘೋಷಣೆ ಹೊರಡಿಸಬಹುದು.
‘‘2022ರವರೆಗೆ ರೇಡ್ ಅವರ ಒಪ್ಪಂದವಿರುವ ಸಾಧ್ಯಾತೆಯಿದೆ. ಆದರೆ ಪ್ರತೀ ಟೂರ್ನಿಯ ಬಳಿಕ ಅವರ ಪ್ರದರ್ಶನವನ್ನು ಎನ್‌ಎಸ್‌ಎಫ್ ಪರಿಶೀಲನೆ ನಡೆಸಲಿದೆ’’ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ವಿಶ್ವಕಪ್ ಹಾಕಿ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಸೋತ ಬಳಿಕ ಕೋಚ್ ಸ್ಥಾನದಲ್ಲಿದ್ದ ಹರೇಂದ್ರ ಸಿಂಗ್ ಅವರನ್ನು ವಜಾ ಮಾಡಲಾಗಿತ್ತು. ಅಂದಿನಿಂದ ಕೋಚ್ ಹುದ್ದೆ ಖಾಲಿ ಬಿದ್ದಿದೆ.