×
Ad

ಜೊಕೊವಿಕ್‌ಗೆ ಅಗುಟ್ ಶಾಕ್

Update: 2019-03-27 23:54 IST

ಮಿಯಾಮಿ, ಮಾ.27: ರಾಬರ್ಟೊ ಬೌಟಿಸ್ಟಾ ಅಗುಟ್ ಮಂಗಳವಾರ ನಡೆದ ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್‌ರನ್ನು ಸೋಲಿಸಿ ಆಘಾತ ನೀಡಿದರು. ಅಗುಟ್‌ಗೆ ಶರಣಾದ ಜೊಕೊವಿಕ್‌ಗೆ ದಾಖಲೆಯ 7ನೇ ಬಾರಿ ಮಿಯಾಮಿ ಓಪನ್ ಎಟಿಪಿ ಪ್ರಶಸ್ತಿ ಜಯಿಸಬೇಕೆಂಬ ಕನಸು ನಾಟಕೀಯ ಶೈಲಿಯಲ್ಲಿ ಕೊನೆಗೊಂಡಿದೆ.

30ರ ಹರೆಯದ ಅಗುಟ್ ಪುರುಷರ ಸಿಂಗಲ್ಸ್‌ನ ಅಂತಿಮ-16ರ ಸುತ್ತಿನಲ್ಲಿ ಮೊದಲ ಸೆಟನ್ನು 1-6ರಿಂದ ಸೋತಿದ್ದರೂ, ಆ ಬಳಿಕ ಎರಡು ಸೆಟ್‌ಗಳನ್ನು 7-5, 6-3 ಅಂತರದಿಂದ ಗೆದ್ದುಕೊಂಡು ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡರು.

ಅಮೆರಿಕದ ಆಟಗಾರ ಜಾನ್ ಇಸ್ನೆರ್ ಗ್ರೇಟ್ ಬ್ರಿಟನ್‌ನ ಕೈಲ್ ಎಡ್ಮಂಡ್‌ರನ್ನು 7-6(7/5), 7-6(7/3) ಸೆಟ್‌ಗಳಿಂದ ಸೋಲಿಸಿ ಅಂತಿಮ-8ರ ಘಟ್ಟ ಪ್ರವೇಶಿಸಿದ್ದಾರೆ. ಕ್ವಾಲಿಫೈಯಿಂಗ್ ರೌಂಡ್ ಮೂಲಕ ಟೂರ್ನಿ ಪ್ರವೇಶಿಸಿರುವ ಕೆನಡಾದ 18ರ ಹರೆಯದ ಫೆಲಿಕ್ ಅಗೆರ್-ಅಲಿಯಾಸಿಮ್ ಜಾರ್ಜಿಯದ ನಿಕೊಲೊಝ್ ಬಾಸಿಲಾಶ್‌ವಿಲಿ ವಿರುದ್ಧ 7-6(7/4), 6-4 ಅಂತರದಿಂದ ಗೆಲುವು ಸಾಧಿಸಿದರು.

ಇದೇ ವೇಳೆ ಮಹಿಳೆಯರ ಸಿಂಗಲ್ಸ್ ಹಣಾಹಣಿಯಲ್ಲಿ ಆಸ್ಟ್ರೇಲಿಯದ ಅಶ್ಲೆಘ್ ಬಾರ್ಟಿ ವಿಶ್ವದ ನಂ.2ನೇ ಆಟಗಾರ್ತಿ ಪೆಟ್ರಾ ಕ್ವಿಟೋವಾ ಅವರನ್ನು 7-6(8/6), 3-6, 6-2 ಸೆಟ್‌ಗಳಿಂದ ಮಣಿಸಿ ಅಚ್ಚರಿಗೊಳಿಸಿದರು.

ಈ ಮೊದಲು ನಾಲ್ಕು ಬಾರಿ ಕ್ವಿಟೋವಾಗೆ ಮುಖಾಮುಖಿಯಾಗಿದ್ದ ಬಾರ್ಟಿ ಇದೇ ಮೊದಲ ಬಾರಿ ಜಯ ದಾಖಲಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಅನೆಟ್ಟ್ ಕಾಂಟವೆಟ್‌ರನ್ನು ಎದುರಿಸಲಿದ್ದಾರೆ. ಇಸ್ಟೋನಿಯ ಆಟಗಾರ್ತಿ ಕಾಂಟವೆಟ್ ಕೊರಿಯಾದ ಸಿ-ಸು-ವೀ ಅವರನ್ನು 3-6, 6-2, 7-5 ಸೆಟ್‌ಗಳಿಂದ ಮಣಿಸಿ ಮಿಯಾಮಿ ಓಪನ್‌ನಲ್ಲಿ ಮೊದಲ ಬಾರಿ ಅಂತಿಮ-4ರ ಘಟ್ಟ ಪ್ರವೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News