ಅಂಡರ್-17 ವಿಶ್ವಕಪ್ ಆತಿಥ್ಯ ಭಾರತಕ್ಕೆ ಲಭಿಸಿದ ಶ್ರೇಷ್ಠ ಅವಕಾಶ: ದೇವಿ
ಹೊಸದಿಲ್ಲಿ, ಮಾ.27: ಭಾರತ 2020ರಲ್ಲಿ ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಆತಿಥ್ಯ ಪಡೆದಿರುವುದು ಮಹಾಕ್ರಾಂತಿಗಿಂತ ಕಡಿಮೆಯೇನಲ್ಲ ಎಂದು ದೇಶದ ಪ್ರಮುಖ ಮಹಿಳಾ ಫುಟ್ಬಾಲ್ ಆಟಗಾರ್ತಿ ಬೆಮ್‌ಬೆಮ್ ದೇವಿ ಅಭಿಪ್ರಾಯಪಟ್ಟಿದ್ದಾರೆ.
ಮಣಿಪುರದ ದೇವಿ ಭಾರತವನ್ನು ಎರಡು ದಶಕಗಳಿ ಗಿಂತಲೂ ಹೆಚ್ಚು ಸಮಯದಿಂದ ಪ್ರತಿನಿಧಿಸುತ್ತಿದ್ದು, ತಂಡದ ನಾಯಕತ್ವವನ್ನು ವಹಿಸಿದ್ದರು. ಭಾರತ ಇದೇ ಮೊದಲ ಬಾರಿ ಅಂಡರ್-17 ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿದೆ.
‘‘ಮಹಿಳಾ ಫುಟ್ಬಾಲ್‌ನ್ನು ಜಗತ್ತಿನ ಭೂಪಟಕ್ಕೆ ಸೇರಿಸಲು ಫಿಫಾ ಅಂಡರ್-17 ವಿಶ್ವಕಪ್ ಭಾರತಕ್ಕೆ ಉತ್ತಮ ಅವಕಾಶವಾಗಿದೆ. ಫಿಫಾ ವಿಶ್ವಕಪ್‌ನಲ್ಲಿ ನಾವು ಪಂದ್ಯವನ್ನು ಗೆಲ್ಲುವ ವಿಶ್ವಾಸ ನನಗಿದೆ. ನಾನು ಅಂಡರ್-16 ತಂಡದೊಂದಿಗೆ ಕೆಲಸ ಮಾಡಿದ್ದು, ಆ ತಂಡ ನಿಜಕ್ಕೂ ಚಾಣಾಕ್ಷವಾಗಿದ್ದು, ಪಂದ್ಯವನ್ನು ಹೇಗೆ ಆಡಬೇಕೆಂದು ಅದಕ್ಕೆ ಗೊತ್ತಿದೆ. ನಾವು ಶೂನ್ಯಕ್ಕಿಂತ ಕೆಳಗಿನ ತಾಪಮಾನದಲ್ಲಿ ಎಎಫ್‌ಸಿ ಅಂಡರ್-16 ಅರ್ಹತಾ ಪಂದ್ಯಗಳನ್ನು ಆಡಿದ್ದ ಹಿನ್ನೆಲೆಯಲ್ಲಿ ಸೋತಿದ್ದೆವು. ನಾವು ಸಾಕಷ್ಟು ಸಾಧನೆ ಮಾಡುವ ಅದಮ್ಯ ವಿಶ್ವಾಸವಿದೆ’’ ಎಂದು ಎಫ್‌ಐಸಿಸಿಐ ಸಮ್ಮೇಳನದಲ್ಲಿ ತಿಳಿಸಿದ್ದಾರೆ.
ಭಾರತ 2017ರಲ್ಲಿ ಪುರುಷರ ಫಿಫಾ ಅಂಡರ್-17 ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿದ್ದು, ಭಾರತದ ಉತ್ತಮ ಆತಿಥ್ಯಕ್ಕೆ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಶ್ಲಾಘನೆ ವ್ಯಕ್ತಪಡಿಸಿದ್ದರು.