ಫಾದರ್ ಮುಲ್ಲರ್ ವಾಕ್ ಮತ್ತು ಶ್ರವಣ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

Update: 2019-03-28 08:02 GMT

ಮಂಗಳೂರು, ಮಾ.28: ಫಾದರ್ ಮುಲ್ಲರ್ ವಾಕ್ ಮತ್ತು ಶ್ರವಣ ಕಾಲೇಜು ವತಿಯಿಂದ ಮೂರು ದಿನಗಳ ಕಾಲ ನಡೆಯಲಿರುವ ವಾಕ್ ಮತ್ತು ಶ್ರವಣದ ಬಗೆಗಿನ ರಾಷ್ಟ್ರೀಯ ವಿಚಾರ ಸಂಕಿರಣ 'ಫೋಕಸ್- 1' ಇಂದು ಆರಂಭಗೊಂಡಿತು.

ಫಾದರ್ ಮುಲ್ಲರ್ ಸಂಸ್ಥೆಯ ದಶಮಾನೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಆಡಳಿತಾಧಿಕಾರಿ ಮಾತನಾಡಿ, ರೆ.ಫಾ. ರುಡಾಲ್ಪ್ ರವಿ ಡೇಸಾ, ವಾಕ್ ಮತ್ತು ಶ್ರವಣ ದೋಷದಿಂದ ಬಳಲುವವರಿಗೆ ಚಿಕಿತ್ಸೆ ಕೊಡಿಸಿ ಅವರಿಗೆ ಉತ್ತಮ ಬಾಳು ಒದಗಿಸಲು ಪ್ರಯತ್ನಿಸಬೇಕು ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವೈದ್ಯಕೀಯ ಪದವಿ ಪಡೆದರಷ್ಟೇ ಸಾಲದು. ಆ ಕ್ಷೇತ್ರದಲ್ಲಿ ಆ ಬಗ್ಗೆ ನೈಪುಣ್ಯತೆ ಜತೆಗೆ ಅಪಾರ ಜ್ಞಾನವನ್ನು ಹೊಂದಿದ್ದರೆ ಮಾತ್ರ ಸಮರ್ಪಕ ಚಿಕಿತ್ಸೆ ಒದಗಿಸಲು ಸಾಧ್ಯ. ಇಲ್ಲವಾದರೆ ಕೇವಲ ವೈದ್ಯನಾಗಿಯಷ್ಟೇ ಆತ ಉಳಿದುಕೊಳ್ಳುತ್ತಾನೆ ಹೊರತು ದಕ್ಷ ವೈದ್ಯನಾಗಿ ರೋಗಿಗಳ ಮನಸ್ಸು ಗೆಲ್ಲಲು ಸಾಧ್ಯವಿಲ್ಲ ಎಂದರು. ವಾಕ್ ಮತ್ತು ಶ್ರವಣದೋಷದಂತಹ ತೊಂದರೆಗಳಿಂದ ಬಳಲುವವರಿಗೆ ಚಿಕಿತ್ಸೆ ಜತೆ ಸ್ನೇಹಮಯ ವಾತಾವರಣವನ್ನೂ ಕಲ್ಪಿಸಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ, ಅಂಗ ನ್ಯೂನತೆ ಅದೊಂದು ಶಾಪವಲ್ಲ, ವಂಶ ಪಾರಂಪರ್ಯ ಬಳುವಳಿಯೂ ಅಲ್ಲ. ಬದಲಾಗಿ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು. ಅದಕ್ಕಾಗಿ ಈ ಕ್ಷೇತ್ರದಲ್ಲಿ ವೈದ್ಯರ ವಿನೂತನ ಅವಿಷ್ಕಾರಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ವಿಚಾರ ಸಂಕಿರಣದ ಸಂಘಟನಾ ಅಧ್ಯಕ್ಷ ಪ್ರೊ ಅಖಿಲೇಶ್ ಪಿ.ಎಂ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಡಾ. ಸಂತೋಷ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News