ಮಾಧವನ್ ನಾಯರ್ ಗೆ ಆಗ ಮಾರಕವಾಗಿದ್ದ 'ಉಪಗ್ರಹ ನಾಶ ಸಾಧನೆ' ಈಗ ಪೂರಕ ಆಯಿತು!

Update: 2019-03-28 16:44 GMT

ಇಸ್ರೋದ ಮಾಜಿ ಅಧ್ಯಕ್ಷ, ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಯಾದ ಜಿ. ಮಾಧವನ್ ನಾಯರ್ ನಿನ್ನೆ ಹೇಳಿಕೆಯೊಂದನ್ನು ನೀಡಿದ, “ದಶಕಗಳ ಹಿಂದೆಯೇ ಭಾರತಕ್ಕೆ ಉಪಗ್ರಹ ವಿರೋಧಿ ಕ್ಷಿಪಣಿ ಸಾಮರ್ಥ್ಯವಿತ್ತು, ಆದರೆ ಅದನ್ನು ಕಾರ್ಯಗತಗೊಳಿಸಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿತ್ತು” ಎಂದು ಹೇಳಿದ್ದರು.

ದೇಶದ ವಿಜ್ಞಾನಿಗಳು ದೇಶೀಯ ನಿರ್ಮಿತ ಕ್ಷಿಪಣಿಯಿಂದ ಭೂಮಿಯ ಕೆಳ ಕಕ್ಷೆಯಲ್ಲಿ ಸುತ್ತುತ್ತಿರುವ ಸಜೀವ ಉಪಗ್ರಹವನ್ನು ಹೊಡೆದುರುಳಿಸಿದ್ದಾರೆ. ಭಾರತ ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಪ್ರಧಾನಿ ಘೋಷಿಸಿದ್ದ ನಂತರ ಜಿ. ಮಾಧವನ್ ಈ ಹೇಳಿಕೆ ನೀಡಿದ್ದರು.

“ಈಗ ಮೋದಿ ಜೀ ಕ್ರಮ ಕೈಗೊಂಡಿದ್ದಾರೆ.  ನಾವಿದನ್ನು ಮಾಡುತ್ತೇವೆ ಎಂದು ಹೇಳಲು ಅವರಿಗೆ ರಾಜಕೀಯ ಇಚ್ಛೆ ಮತ್ತು ಧೈರ್ಯವಿತ್ತು. ನಾವೀಗ ಇಡೀ ಜಗತ್ತಿಗೇ ನಮ್ಮ ಶಕ್ತಿ ಪ್ರದರ್ಶಿಸಿದ್ದೇವೆ” ಎಂದು ಜಿ ಮಾಧವನ್ ಹೇಳಿದ್ದರು.

ಮಾಧವನ್ ಹೇಳಿಕೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಲು ಆರಂಭಿಸಿದ್ದರು. ಕಾಂಗ್ರೆಸ್ ಗೆ ಇಚ್ಛಾಶಕ್ತಿಯ ಕೊರತೆಯಿತ್ತು ಎಂದಿದ್ದರು. ಮಾಧವನ್ ಅವರ ಹೇಳಿಕೆಯು ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.

ಆದರೆ 2007ರಲ್ಲಿ ಇದೇ ಜಿ. ಮಾಧವನ್ ನಾಯರ್ ಬಾಹ್ಯಾಕಾಶದಲ್ಲಿ ಕ್ಷಿಪಣಿ ದಾಳಿಗೆ ಸಂಬಂಧಿಸಿ ವ್ಯತಿರಿಕ್ತ ಹೇಳಿಕೆ ನೀಡಿದ್ದಲ್ಲದೆ, ಇಂತಹ ಪ್ರಯತ್ನಗಳು ಸಂಪೂರ್ಣ ತಪ್ಪು ಎಂದಿದ್ದರು, 2007ರಲ್ಲಿ ಚೀನಾವು ಹವಾಮಾನ ಉಪಗ್ರಹವನ್ನು ಹೊಡೆದುರುಳಿಸಿದ್ದಾಗ ಈ ಬಗ್ಗೆ ಅಂದು ಪ್ರತಿಕ್ರಿಯಿಸಿದ್ದ ಮಾಧವನ್ ನಾಯರ್, “ಚೀನಾ ಹಾಗೆ ಮಾಡಬಾರದಿತ್ತು. ಇದು ಅಂತಾರಾಷ್ಟ್ರೀಯ ಒಡಂಬಡಿಕೆಯ ವಿರುದ್ಧವಾಗಿದೆ. ನಮ್ಮ ಬಾಹ್ಯಾಕಾಶವನ್ನು ಶಸ್ತ್ರಮಯವಾಗಿಸಬಾರದು. ಉಪಗ್ರಹವೊಂದನ್ನು ಕೊಲ್ಲುವ ಮೂಲಕ ನೀವು ಹೆಚ್ಚಿನ ಅವಶೇಷಗಳನ್ನು ಸೃಷ್ಟಿಸಿದ್ದೀರಿ. ಇಂದು ಕಕ್ಷೆಯಲ್ಲಿ 8,000 ವಸ್ತುಗಳಿವೆ. ಒಂದು ಉಪಗ್ರಹವನ್ನು ಧ್ವಂಸ ಮಾಡುವ ಮೂಲಕ ನೀವು ನೂರಾರು ವಸ್ತುಗಳನ್ನು ಸೃಷ್ಟಿಸಿದ್ದೀರಿ. ಅವರು ಏಕೆ ಹೀಗೆ ಮಾಡಿದರು ಎನ್ನುವುದು ನನಗೆ ಗೊತ್ತಿಲ್ಲ” ಎಂದು ಹೇಳಿದ್ದರು.

ಆದರೆ ಇಂದು ಅದೇ ನಾಯರ್ ಬಾಹ್ಯಾಕಾಶದಲ್ಲಿ ಕ್ಷಿಪಣಿ ವಿರೋಧಿ ಸಾಮರ್ಥ್ಯವನ್ನು ಮೆಚ್ಚಿದ್ದಾರಲ್ಲದೆ, ವಿಜ್ಞಾನಿಗಳ ಸಾಧನೆಯ ಕ್ರೆಡಿಟನ್ನು ಮೋದಿಯವರಿಗೆ ನೀಡಿದ್ದಾರೆ.

ಇಸ್ರೋ ಮುಖ್ಯಸ್ಥರಾಗಿದ್ದ ನಾಯರ್, 2003ರಿಂದ 2009ರವರೆಗೆ ಬಾಹ್ಯಾಕಾಶ ವಿಭಾಗದ ಕಾರ್ಯದರ್ಶಿಯಾಗಿದ್ದರು. 2018 ಅಕ್ಟೋಬರ್ ನಲ್ಲಿ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು.

ಮಂಗಳಯಾನ ‘ಪಬ್ಲಿಸಿಟಿ ಸ್ಟಂಟ್’ ಎಂದಿದ್ದ ನಾಯರ್

2013ರಲ್ಲಿ ಮಂಗಳಯಾನದ ಬಗ್ಗೆ ಮಾತನಾಡಿದ್ದ ಮಾಧವನ್ ನಾಯರ್ , “ಮಂಗಳಯಾನ ಪಬ್ಲಿಸಿಟಿ ಸ್ಟಂಟ್” ಎಂದಿದ್ದರು. ಅಂದು ಅವರ ಹೇಳಿಕೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.

578 ಕೋಟಿ ರೂ. ಹಗರಣದ ಆರೋಪ

ಇಸ್ರೋ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ನಾಯರ್ ಆಂಟ್ರಿಕ್ಸ್ ನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಬಹುಕೋಟಿ ವ್ಯಾಪಾರ ಒಪ್ಪಂದವನ್ನು ಲಾಭಕ್ಕಾಗಿ ಪಡೆದು ಅಂತಿಮಗೊಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಆಂಟ್ರಿಕ್ಸ್ ಗಾಗಿ ಖಾಸಗಿ ಮಲ್ಟಿಮೀಡಿಯಾ ಸಂಸ್ಥೆ ದೇವಾಸ್ ಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಅಕ್ರಮವಾಗಿ 578 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನಾಯರ್ ವಿರುದ್ಧ ನಂತರ ಚಾರ್ಜ್ ಶೀಟ್ ಸಲ್ಲಿಸಿತ್ತು.  ಈ ಬಗ್ಗೆ ವಿಚಾರಣೆ ನಡೆಸಿದ್ದ ದಿಲ್ಲಿ ಕೋರ್ಟ್ 2017ರ ಡಿಸೆಂಬರ್ ನಲ್ಲಿ ಜಾಮೀನು ಮಂಜೂರು ಮಾಡಿತ್ತು.

ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸಿಬಿಐ, ಆರೋಪಿಗೆ ಜಾಮೀನು ನೀಡಿದರೆ ದೇಶದಿಂದ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿದೆ ಎಂದಿತ್ತು. ಇದಾದ ನಂತರ 2018ರಲ್ಲಿ ಅವರು ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News