ಪ.ಬಂಗಾಳದಲ್ಲಿ ಸಾಂವಿಧಾನಿಕ ಅರಾಜಕತೆ: ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರದ ದೂರು

Update: 2019-03-29 15:33 GMT

ಹೊಸದಿಲ್ಲಿ, ಮಾ.29: ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಸಾಂವಿಧಾನಿಕ ಅರಾಜಕತೆಯ ಸ್ಥಿತಿಯಿದೆ ಎಂದು ಕೇಂದ್ರ ಸರಕಾರ ಆರೋಪಿಸಿದ್ದು, ಇದಕ್ಕೆ ಪೂರಕವಾದ ಘಟನೆಯೊಂದನ್ನು ಸುಪ್ರೀಂಕೋರ್ಟ್‌ನ ಗಮನಕ್ಕೆ ತಂದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ಮುಖಂಡೆ ಮಮತಾ ಬ್ಯಾನರ್ಜಿಯ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿಯ ಪತ್ನಿಯ ಲಗೇಜನ್ನು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಲು ಮುಂದಾದಾಗ ಪೊಲೀಸರು ಅಧಿಕಾರಿಗಳನ್ನು ಬೆದರಿಸಿದ್ದಾರೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಗಮನಕ್ಕೆ ತಂದಿದೆ. ಶಾರದಾ ಚಿಟ್‌ಫಂಡ್ ಹಗರಣದ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್‌ಗೆ ಈ ಮಾಹಿತಿ ನೀಡಲಾಗಿದೆ.

ಮಾರ್ಚ್ 15-16ರ ರಾತ್ರಿ ಈ ಘಟನೆ ನಡೆದಿದೆ. ಕೋಲ್ಕತಾದ ನೇತಾಜಿ ಸುಭಾಷ್‌ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಥಾಯ್ ಏರ್‌ವೇಸ್ ವಿಮಾನದಲ್ಲಿ ಬಂದಿಳಿದ ಸಂಸದ ಬ್ಯಾನರ್ಜಿ ಪತ್ನಿ ರುಜಿರಾ ನರೂಲಾರ ಲಗೇಜ್ ತಪಾಸಣೆ ಸಂದರ್ಭ ಘೋಷಣೆ ಮಾಡದ ಹೆಚ್ಚುವರಿ ಚಿನ್ನ ಪತ್ತೆಯಾಗಿದೆ. ಈ ಸಂದರ್ಭ ಮಧ್ಯಪ್ರವೇಶಿಸಿದ ರಾಜ್ಯದ ಪೊಲೀಸರು ಕಸ್ಟಮ್ಸ್ ಅಧಿಕಾರಿಗಳನ್ನು ಬೆದರಿಸಿದ್ದಾರೆ. ಈ ಕುರಿತು ಕಸ್ಟಮ್ಸ್ ಅಧಿಕಾರಿಗಳು ದೂರು ಸಲ್ಲಿಸಿದ್ದರೆ, ನರೂಲಾ ಕೂಡಾ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಒಳಸಂಚು, ಅಕ್ರಮವಾಗಿ ನಿರ್ಬಂಧಿಸಿರುವುದು, ಮಹಿಳೆಯ ವಿರುದ್ಧ ಕ್ರಿಮಿನಲ್ ಆಕ್ರಮಣ ಮುಂತಾದ ದೂರು ದಾಖಲಿಸಿದ್ದಾರೆ .

ಈ ಘಟನೆ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸಾಲಿಸಿಟರ್ ಜನರಲ್ ಸುಪ್ರೀಂಕೋರ್ಟ್‌ನ ಗಮನಕ್ಕೆ ತಂದಿದ್ದಾರೆ. ಈ ಪ್ರಕರಣವನ್ನು ವಿವರಿಸಿ ಅರ್ಜಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ , ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಸಾಲಿಸಿಟರ್ ಜನರಲ್‌ಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News