ಪಂಜಾಬ್ ಕಿಂಗ್ಸ್‌ಗೆ ಶರಣಾದ ಮುಂಬೈ ಇಂಡಿಯನ್ಸ್
ಮೊಹಾಲಿ, ಮಾ.30: ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರ ಆಕರ್ಷಕ ಅರ್ಧಶತಕ(ಔಟಾಗದೆ 71, 57 ಎಸೆತ)ಕೊಡುಗೆ ನೆರವಿನಿಂದ ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ 9ನೇ ಐಪಿಎಲ್ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅರ್ಧಶತಕ(60, 39 ಎಸೆತ, 6 ಬೌಂಡರಿ, 2 ಸಿಕ್ಸರ್)ಕೊಡುಗೆಯ ನೆರವಿನಿಂದ ಪಂಜಾಬ್ ಗೆಲುವಿಗೆ 177 ರನ್ ಗುರಿ ನೀಡಿತು.
ರಾಹುಲ್(ಔಟಾಗದೆ 71, 57 ಎಸೆತ, 6 ಬೌಂಡರಿ, 1 ಸಿಕ್ಸರ್)ಕೊನೆಯ ತನಕ ಕ್ರೀಸ್ ಕಾಯ್ದುಕೊಂಡು 18.4 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಫೋಟಕ ದಾಂಡಿಗ ಕ್ರಿಸ್ ಗೇಲ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ರಾಹುಲ್ ಮೊದಲ ವಿಕೆಟ್‌ಗೆ 53 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. 24 ಎಸೆತಗಳಲ್ಲಿ 40 ರನ್(3 ಬೌಂಡರಿ, 4 ಸಿಕ್ಸರ್)ಗಳಿಸಿದ ಗೇಲ್ ಅವರು ಕೃಣಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಗೇಲ್ ಔಟಾದ ಬಳಿಕ ರಾಹುಲ್‌ಗೆ ಮಾಯಾಂಕ್ ಅಗರ್ವಾಲ್(43, 21 ಎಸೆತ, 4 ಬೌಂಡರಿ, 2 ಸಿಕ್ಸರ್)ಜೊತೆಯಾದರು. ಈ ಇಬ್ಬರು 64 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಅಗರ್ವಾಲ್ ಔಟಾದ ಬಳಿಕ ಡೇವಿಡ್ ಮಿಲ್ಲರ್‌ರೊಂದಿಗೆ ಕೈಜೋಡಿಸಿದ ರಾಹುಲ್ 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 60 ರನ್ ಸೇರಿಸಿ ತಂಡಕ್ಕೆ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ(32) ಹಾಗೂ ಡಿಕಾಕ್ ಮೊದಲ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ರೋಹಿತ್ ಔಟಾದ ಬಳಿಕ ಯುವರಾಜ್ ಸಿಂಗ್(18) ಅವರೊಂದಿಗೆ ಡಿಕಾಕ್ 3ನೇ ವಿಕೆಟ್‌ಗೆ 58 ರನ್ ಸೇರಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ದೊಡ್ಡ ಜೊತೆಯಾಟ ಮೂಡಿ ಬರಲಿಲ್ಲ. ಹಾರ್ದಿಕ್ ಪಾಂಡ್ಯ(31) ಕೆಳ ಕ್ರಮಾಂಕದಲ್ಲಿ ಒಂದಷ್ಟು ಹೋರಾಟ ನೀಡಿದರು.
ಪಂಜಾಬ್ ಪರ ಮುಹಮ್ಮದ್ ಶಮಿ(2-42), ಎಂ. ಅಶ್ವಿನ್(2-25) ಹಾಗೂ ವಿಲ್‌ಜೊಯೆನ್(2-40) ತಲಾ ಎರಡು ವಿಕೆಟ್ ಪಡೆದರು.