×
Ad

ಬಡ ಮಹಿಳೆಯ ಮನೆಯಲ್ಲಿ ಊಟ ಮಾಡುವ ಫೋಟೋ ಹಾಕಿ ಸಂಬಿತ್ ಪಾತ್ರ ಎಡವಟ್ಟು

Update: 2019-03-31 18:38 IST

ಪುರಿ , ಮಾ. 31 : ಲೋಕಸಭಾ ಚುನಾವಣಾ ಅಖಾಡದ ಕಾವೇರುತ್ತಿದೆ. ನಾಮಪತ್ರ ಪ್ರಕ್ರಿಯೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈಗ ಪ್ರಚಾರ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರತಿಯೊಬ್ಬರಿಗೂ ಆದಷ್ಟು ಹೆಚ್ಚು ಮತದಾರರನ್ನು ತಲುಪಿ ಮನವೊಲಿಸುವ ತವಕ. ಅದಕ್ಕಾಗಿ ಸಾಧ್ಯವಿರುವ ಎಲ್ಲ ಸರ್ಕಸ್ ಗಳನ್ನೂ ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಆದರೆ ಅತಿ ಉತ್ಸಾಹದಲ್ಲಿ ಕೆಲವೊಮ್ಮೆ ಪ್ರಚಾರವೇ ಅಪಪ್ರಚಾರದ ಸಾಧನವಾಗಿ ಮಾರ್ಪಾಡಾಗುತ್ತದೆ. ಅಂತಹದೇ ಒಂದು ಘಟನೆ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗು ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಅವರಿಂದ ನಡೆದಿದೆ. 

ಮೊದಲ ಬಾರಿ ಲೋಕಸಭಾ ಅಖಾಡಕ್ಕಿಳಿದಿರುವ ಸಂಬಿತ್ ಪಾತ್ರ ಮತದಾರರ ಮನಗೆಲ್ಲಲು ಎಲ್ಲ ಕಸರತ್ತುಗಳನ್ನು ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ದೇವರ ಮೂರ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ವಿವಾದಕ್ಕೆ ತುತ್ತಾಗಿದ್ದ ಸಂಬಿತ್ ಈಗ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಈ ಬಾರಿಯದ್ದು ಮಾತ್ರ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಇರಿಸುಮುರುಸು ತರುವಂತಹದ್ದು.

ರವಿವಾರ ಬಡ ಮಹಿಳೆಯ ಪುಟ್ಟ ಮನೆಯೊಂದರಲ್ಲಿ ನೆಲದಲ್ಲಿ ಕುಳಿತು ಊಟ ಮಾಡುವ ವಿಡಿಯೋ ಒಂದನ್ನು ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದರು. ಅದರ ಜೊತೆ " ಈಕೆ ಪುರಿಯ ಸಣ್ಣ ಗ್ರಾಮವೊಂದರ ಬಡ ವಿಧವೆ ಮಹಿಳೆ. ಈಕೆಗೆ ಮೂವರು ಮಕ್ಕಳು. ಅದರಲ್ಲಿ ಇಬ್ಬರು ಅಂಗವಿಕಲರು. ಇನ್ನೊಬ್ಬನಿಗೆ ಕೂಲಿ ಕೆಲಸ. ಇಂತಹ ಬಡ ಮಹಿಳೆಯ ಬದುಕನ್ನು ಪ್ರಧಾನಿ ಮೋದಿಯವರು ಕಟ್ಟುತ್ತಿದ್ದಾರೆ " ಎಂದು ಬರೆದಿದ್ದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆ ಮಹಿಳೆಗೆ ಮನೆಯಾಗಿದೆ ಎಂದು ಜನರಿಗೆ ತಿಳಿಸುವುದು ಸಂಬಿತ್ ಉದ್ದೇಶವಾಗಿತ್ತು.  ತಾವೂ ಊಟ ಮಾಡುತ್ತಾ ಪಕ್ಕದಲ್ಲೇ ಅಡುಗೆ ಮಾಡುತ್ತಿರುವ ವೃದ್ಧ ಮಹಿಳೆಗೂ ತಿನ್ನಿಸುತ್ತಾ ಇರುವ ವಿಡಿಯೋ ಅದು.  ಆದರೆ ಅದರಲ್ಲೊಂದು ದೊಡ್ಡ ಎಡವಟ್ಟಾಗಿದ್ದು ಸಂಬಿತ್ ಅರಿವಿಗೆ ಬಂದಿಲ್ಲ. ಆ ವೃದ್ಧ ಮಹಿಳೆ ಹಳೆಯ ಓಲೆಯೊಂದರಲ್ಲಿ ಅಡುಗೆ ಮಾಡುತ್ತಿರುವುದು ವಿಡಿಯೋ ದಲ್ಲಿ ಸರಿಯಾಗಿ ಕಾಣುತ್ತದೆ.

ಈಗ ಸಂಬಿತ್ ವಿಡಿಯೋ ಇಟ್ಟುಕೊಂಡು ವಿಪಕ್ಷಗಳು ಮೋದಿ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆ ವಿಫಲವಾಗಿದೆ ಎಂದು ಆಡಿಕೊಳ್ಳುತ್ತಿದ್ದಾರೆ.  

ಮೋದಿ ಹಾಗು ಅವರ ಪಕ್ಷದ ನಾಯಕರು ಹೋದಲ್ಲೆಲ್ಲ ಉಜ್ವಲ ಯೋಜನೆಯ ಮೂಲಕ ದೇಶದ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ( ಎಲ್ಪಿಜಿ ) ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಆ ಬಡ ಮಹಿಳೆಗೆ ಎಲ್ಪಿಜಿ ಸಿಲಿಂಡರ್ ಸಿಕ್ಕಿದ ಯಾವುದೇ ಕುರುಹು ಅಲ್ಲಿ ಕಾಣುತ್ತಿಲ್ಲ. ಆಕೆ ಇನ್ನೂ ಹಳೆಯ ಒಲೆಯಲ್ಲೇ ಅಡುಗೆ ಮಾಡುತ್ತಿದ್ದಾಳೆ. ಹಾಗಾದರೆ ಉಜ್ವಲ ಯೋಜನೆಯಲ್ಲಿ ಆಕೆಗೆ ಎಲ್ಪಿಜಿ ಸಿಲಿಂಡರ್ ಯಾಕೆ ಸಿಕ್ಕಿಲ್ಲ ಎಂಬ ಪ್ರಶ್ನೆ ಈಗ ಬಿಜೆಪಿಗೆ ಎದುರಾಗಿದೆ.

ಇನ್ನೊಂದು ವಿಶೇಷವೆಂದರೆ ಉಜ್ವಲ ಯೋಜನೆ ಕೇಂದ್ರ ಪೆಟ್ರೋಲಿಯಂ ಮತ್ತು ಅನಿಲ ಖಾತೆ ಯಡಿ ಬರುತ್ತದೆ . ಆ ಖಾತೆಯ ಸಚಿವ ಒಡಿಶಾದ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News