×
Ad

ಕಾಂಗ್ರೆಸ್ ಅಭ್ಯರ್ಥಿಯಾದ ಬೆನ್ನಿಗೇ ಊರ್ಮಿಳಾ ಮಾತೋಂಡ್ಕರ್ ರನ್ನು ಮತಾಂತರ ಮಾಡಿದ ಟ್ರೋಲ್ ಗಳು!

Update: 2019-03-31 20:06 IST

ಮುಂಬೈ, ಮಾ. 31 : ಮುಂಬೈ ಉತ್ತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆಯಾದ ಬೆನ್ನಿಗೇ ಖ್ಯಾತ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರನ್ನು ಇಂಟರ್ನೆಟ್ ಟ್ರೋಲ್ ಗಳು ಮತಾಂತರ ಮಾಡಿಸಿಬಿಟ್ಟಿದ್ದಾರೆ ! 

ಊರ್ಮಿಳಾ ಅವರ ವಿಕಿಪೀಡಿಯದಲ್ಲಿರುವ ಪರಿಚಯ ಪೇಜ್ ಅನ್ನು ಎಡಿಟ್ ಮಾಡಿರುವ ಟ್ರೋಲ್ ಗಳು ಆಕೆಯ ಹೆಸರು, ಧರ್ಮ ಹಾಗು ಇತರ ಪ್ರಮುಖ ವಿವರಗಳನ್ನು ತಿರುಚಿ ಬದಲಾಯಿಸಿಬಿಟ್ಟಿದ್ದಾರೆ.

ಊರ್ಮಿಳಾ ಹೆಸರನ್ನು ಮರ್ಯಮ್ ಅಕ್ತರ್ ಮೀರ್ ಎಂದು ಬದಲಾಯಿಸಿರುವ ಟ್ರೋಲ್ ಗಳು ಆಕೆಯ ತಂದೆಯ ಹೆಸರನ್ನು ಶಿವೇಂದರ್ ಸಿಂಗ್ ಹಾಗು ರುಕ್ಸನಾ ಸುಲ್ತಾನ ಎಂದು ಬದಲಾಯಿಸಿಬಿಟ್ಟಿದ್ದಾರೆ. ಆಕೆಯ ತಂದೆಯ ನಿಜ ಹೆಸರು ಶ್ರೀಕಾಂತ್ ಮಾತೋಂಡ್ಕರ್. ಆಕೆ ಮೊಹಸಿನ್ ಅಕ್ತರ್ ಮೀರ್ ಅವರನ್ನು ಮುಸ್ಲಿಂ ಧರ್ಮದ ವಿಧಿವಿಧಾನಗಳಂತೆ ವಿವಾಹವಾಗಿ ಮುಸ್ಲಿಂ ಆಗಿದ್ದಾರೆ ಎಂದು ಟ್ರೋಲ್ ಗಳು ಇಲ್ಲಿ ಮಾಹಿತಿ ತಿರುಚಿದ್ದಾರೆ. 

ಇದು ಸಮಾಜ ವಿರೋಧಿ ಶಕ್ತಿಗಳು ಮಾಡಿರುವ ಕೆಲಸ. ವಿಕಿಪೀಡಿಯ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಊರ್ಮಿಳಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸ್ಪರ್ಧಿಸುತ್ತಿದ್ದಾರೆ. ಆಕೆ ತನ್ನ ಪ್ರತಿಸ್ಪರ್ಧಿ ಬಗ್ಗೆ ಇಂತಹ ಕೀಳು ಅಭಿರುಚಿಯ ಕೆಲಸ ಮಾಡುವುದಿಲ್ಲ ಎಂದು ಊರ್ಮಿಳಾ ತಂದೆ ಶ್ರೀಕಾಂತ್ ಮಾತೋಂಡ್ಕರ್ ಹೇಳಿದ್ದಾರೆ. 

ಮುಂಬೈ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಮಾತಾಡಿ ಇದು ಬಿಜೆಪಿ ಊರ್ಮಿಳಾ ಅವರ ಸ್ಪರ್ಧೆಯಿಂದ ವಿಚಲಿತವಾಗಿರುವುದನ್ನು ತೋರಿಸುತ್ತದೆ. ಆಕೆಯ ಸ್ಪರ್ಧೆ ಘೋಷಣೆ ಬಳಿಕ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ. ಹಾಗಾಗಿ ಬಿಜೆಪಿಯ ಟ್ರೋಲ್ ಗಳು ಈ ಕೀಳು ಮಟ್ಟದ ಅಪಪ್ರಚಾರ ಅಭಿಯಾನ ನಡೆಸುತ್ತಿದ್ದಾರೆ. ಅವರಿಗೆ ಧರ್ಮೇಂದ್ರ - ಹೇಮಮಾಲಿನಿ ಮದುವೆಯನ್ನು ನೆನಪಿಸಬೇಕೆ ( ಎರಡನೇ ಮದುವೆ ಮಾಡಿಕೊಳ್ಳಲು ಇಸ್ಲಾಂ ಸ್ವೀಕರಿಸಿದ್ದು ) ಎಂದು ಹೇಳಿದ್ದಾರೆ.

ಮೊಹಸಿನ್ ಅಕ್ತರ್ ಮೀರ್ ಅವರನ್ನು ವಿವಾಹವಾಗಿರುವ  ಊರ್ಮಿಳಾ  ಇಸ್ಲಾಂ ಧರ್ಮ ಸ್ವೀಕರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News