ನಾನು ಓಡಿ ಹೋಗಿದ್ದೇನೆ ಎಂದು ಹೇಳುವುದರಿಂದ ಬಿಜೆಪಿಗೆ ಲಾಭವಿದೆ: ಮಲ್ಯ

Update: 2019-03-31 16:14 GMT

ಲಂಡನ್, ಮಾ. 31: ನಾನು ಬ್ಯಾಂಕ್‌ಗಳಿಗೆ ಏನು ಪಾವತಿಸಬೇಕಾಗಿದೆಯೋ ಅದಕ್ಕಿಂತ ಹೆಚ್ಚಿನದನ್ನು ಈಗಾಗಲೇ ವಸೂಲು ಮಾಡಲಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ರವಿವಾರ ಹೇಳಿದ್ದಾರೆ.

‘‘ ‘ನಾನೊಂದು ಪ್ರಚಾರದ ಸರಕು’ (ಪೋಸ್ಟರ್ ಬಾಯ್) ಎಂಬುದಾಗಿ ನಾನು ಈಗಾಗಲೇ ಹೇಳಿದ್ದೇನೆ. ಅದು ನನ್ನ ಬಗ್ಗೆ ಸ್ವತಃ ಪ್ರಧಾನಿ ನೀಡಿರುವ ಹೇಳಿಕೆಯಿಂದ ಸಾಬೀತಾಗಿದೆ ಎಂಬುದನ್ನು ನಾನು ವಿನೀತನಾಗಿ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನಾನು ಬ್ಯಾಂಕ್‌ಗಳಿಗೆ ಏನು ಕೊಡಬೇಕಾಗಿದೆ ಎನ್ನಲಾಗಿದೆಯೋ ಅದಕ್ಕಿಂತ ಹೆಚ್ಚಿನದನ್ನು ನನ್ನ ಸರಕಾರ ವಸೂಲು ಮಾಡಿದೆ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. ನಾನು 1992ರಿಂದ ಬ್ರಿಟನ್ ನಿವಾಸಿ ಎಂಬುದನ್ನು ನಿರ್ಲಕ್ಷಿಸಲಾಗಿದೆ. ನಾನು ಓಡಿ ಹೋಗಿದ್ದೇನೆ ಎಂದು ಹೇಳುವುದರಿಂದ ಬಿಜೆಪಿಗೆ ಲಾಭವಿದೆ’’ ಎಂದು ಮಲ್ಯ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂದು ಕೋರಿ ಭಾರತ ಸಲ್ಲಿಸಿರುವ ಮೊಕದ್ದಮೆಯ ವಿಚಾರಣೆ ಬ್ರಿಟನ್‌ನಲ್ಲಿ ಈಗ ನಡೆಯುತ್ತಿದೆ.

‘ರಿಪಬ್ಲಿಕ್ ಭಾರತ್’ ಸುದ್ದಿವಾಹಿನಿಗೆ ಮಾರ್ಚ್ 29ರಂದು ಸಂದರ್ಶನ ನೀಡಿದ ಪ್ರಧಾನಿ ಮೋದಿ, ಮಲ್ಯರ ಗಡಿಪಾರು ಪ್ರಕ್ರಿಯೆ ಕೊನೆಯ ಹಂತದಲ್ಲಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರು ಹಾಗೂ ಅವರಿಂದ ಸರಕಾರ ಹಣ ವಸೂಲು ಮಾಡಿದೆ ಎಂದು ಹೇಳಿದ್ದರು.

ಪ್ರಧಾನಿ ಮೋದಿಯ ಹೇಳಿಕೆಗೆ ಮತ್ತಷ್ಟು ಪ್ರತಿಕ್ರಿಯಿಸಿದ ಮಲ್ಯ, ನನ್ನಿಂದ ಸಂಪೂರ್ಣ ಹಣ ವಸೂಲು ಮಾಡಲಾಗಿದೆ ಎಂಬುದಾಗಿ ಪ್ರಧಾನಿ ಹೇಳಿದ ಬಳಿಕವೂ ಬಿಜೆಪಿಯ ವಕ್ತಾರರು ನನ್ನ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

►ನನ್ನ ವಿರುದ್ಧ ಯಾಕೆ ಮಾತನಾಡುತ್ತೀರಿ?

‘‘ಪ್ರಧಾನಿ ಮೋದಿ ಅವರ ಸಂದರ್ಶನ ನೋಡಿದೆ. ಸಂದರ್ಶನದಲ್ಲಿ ಮೋದಿ ನನ್ನ ಹೆಸರು ಹೇಳುತ್ತಾರೆ ಹಾಗೂ ನಾನು ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ಕೊಡಬೇಕಾಗಿದ್ದರೂ ತನ್ನ ಸರಕಾರ ನನ್ನ 14,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ ಎಂದು ಅವರು ಹೇಳುತ್ತಾರೆ. ಸಂಪೂರ್ಣ ವಸೂಲು ಆಗಿದೆ ಎಂಬುದಾಗಿ ಉನ್ನತ ಪ್ರಾಧಿಕಾರಿಯೇ ಖಚಿತಪಡಿಸಿದ್ದಾರೆ. ಹಾಗಾದರೆ, ಬಿಜೆಪಿ ವಕ್ತಾರರು ಯಾಕೆ ನನ್ನ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುವುದನ್ನು ಮುಂದುವರಿಸಿದ್ದಾರೆ’’ ಎಂದು ಮಲ್ಯ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News