ರಸ್ತೆ ಅಪಘಾತದಲ್ಲಿ ಮಹಾಮೈತ್ರಿ ಅಭ್ಯರ್ಥಿಗೆ ಗಾಯ: ಕೊಲೆಗೆ ಸಂಚು ಆರೋಪ

Update: 2019-03-31 17:35 GMT

ಪಾಟ್ನ , ಮಾ.31: ಬಿಹಾರದ ಔರಂಗಾಬಾದ್ ಕ್ಷೇತ್ರದ ಮಹಾಮ್ರೈತ್ರಿಕೂಟದ ಅಭ್ಯರ್ಥಿ, ಹಿಂದುಸ್ತಾನಿ ಅವಾಮ್ ಮೋರ್ಚ-ಸೆಕ್ಯುಲರ್(ಎಚ್‌ಎಎಂ-ಎಸ್) ಪಕ್ಷದ ಮುಖಂಡ ಉಪೇಂದ್ರ ಪ್ರಸಾದ್ ಶನಿವಾರ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದಾರೆ.

ತನ್ನನ್ನು ಕೊಲೆ ಮಾಡಲು ನಡೆಸಿರುವ ಸಂಚು ಇದಾಗಿದೆ ಎಂದು ಪ್ರಸಾದ್ ಆರೋಪಿಸಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯಕ್ಕೆ ಔರಂಗಾಬಾದ್‌ಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 139ರಲ್ಲಿ ವೇಗವಾಗಿ ಧಾವಿಸಿ ಬಂದ ಬೊಲೆರೊ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತ ನಡೆದ ತಕ್ಷಣ ಸ್ಥಳದಲ್ಲಿ ಒಟ್ಟುಸೇರಿದ ಉಪೇಂದ್ರ ಪ್ರಸಾದ್ ಬೆಂಬಲಿಗರು ಪ್ರತಿಭಟನೆ ಆರಂಭಿಸಿದರು.

ರಾಂಗ್ ಸೈಡಿನಿಂದ ಧಾವಿಸಿ ಬಂದ ವಾಹನ ನನ್ನ ಕಾರಿಗೆ ಡಿಕ್ಕಿಯಾಗಿ ಕಾರನ್ನು ಎಳೆದೊಯ್ಯಲು ಪ್ರಯತ್ನಿಸಿದೆ. ಆದರೆ ಸಮಯಪ್ರಜ್ಞೆ ತೋರಿದ ಕಾರಿನ ಡ್ರೈವರ್ ತುರ್ತು ಬ್ರೇಕ್ ಅದುಮಿದ ಕಾರಣ ಅಪಾಯವಿಲ್ಲದೆ ಪಾರಾಗಿದ್ದೇವೆ. ಇದು ತನ್ನನ್ನು ಕೊಲ್ಲಲು ನಡೆಸಿದ ಸಂಚು ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಪ್ರಸಾದ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್- ಆರ್‌ಜೆಡಿ ಮಹಾಮೈತ್ರಿಕೂಟದ ಪಕ್ಷವಾಗಿರುವ ಮಾಜಿ ಸಚಿವ ಜೀತನ್‌ರಾಮ್ ಮಾಂಜಿ ನೇತೃತ್ವದ ಎಚ್‌ಎಎಂ-ಎಸ್ ಬಿಹಾರದಲ್ಲಿ ಮೂರು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News