×
Ad

ರಾಜಕೀಯ ವಲಯದಲ್ಲಿ ಸಂಚಲನ

Update: 2019-03-31 23:53 IST

ಮುಂಬೈ,ಮಾ.31: ಕ್ರಿಕೆಟ್ ಜಗತ್ತಿನ ದಿಗ್ಗಜ ಸಚಿನ್ ತೆಂಡುಲ್ಕರ್ ಶನಿವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿರುವ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ತೆಂಡೂಲ್ಕರ್ ರಾಜಕೀಯ ಪ್ರವೇಶಿಸುವ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ನಂಬಿಕಸ್ಥ ಮೂಲಗಳು ಸ್ಪಷ್ಟಪಡಿಸಿದ್ದರೂ ಅವರು ಒಂದೊಮ್ಮೆ ಪವಾರ್ ಅಧಿಕಾರದಲ್ಲಿದ್ದ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ)ಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಎಂಸಿಎ ಆಡಳಿತವನ್ನು ಸದ್ಯ ಪ್ರಭಾರ ಸಮಿತಿ ನೋಡಿಕೊಳ್ಳುತ್ತಿದ್ದು ಲೋಧಾ ಸುಧಾರಣೆಗಳನ್ನು ಅನುಷ್ಠಾನಗೊಳಿಸಿದ ನಂತರ ಚುನಾವಣೆ ನಡೆಯಲಿದೆ.

ತೆಂಡೂಲ್ಕರ್ ಜೊತೆ ತಂಡದಲ್ಲಿದ್ದ ಸೌರವ್ ಗಂಗುಲಿ ಕ್ರಿಕೆಟ್ ಅಸೋಸಿಯೇಶನ್ ಆಫ್ ಬೆಂಗಾಲ್ (ಸಿಎಬಿ)ನ ಅಧ್ಯಕ್ಷರಾಗಿದ್ದು ಸಚಿನ್ ಕೂಡಾ ಭವಿಷ್ಯದಲ್ಲಿ ಅದೇ ಮಾದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಮಾತುಗಳು ಕೇಳಿಬಂದಿವೆ. ಈ ತಿಂಗಳ ಆರಂಭದಲ್ಲಿ ಸದಸ್ಯರಿಂದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಎಂಸಿಎಯಿಂದ ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ನೇತೃತ್ವದ ಹಿರಿಯ ಆಯ್ಕೆ ಸಮಿತಿಯ ಎಲ್ಲ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News