ಬಾರ್ಸಿಲೋನಾಗೆ ಜಯ
ಮ್ಯಾಡ್ರಿಡ್, ಮಾ.31: ಲಾಲಿಗಾ ಫುಟ್ಬಾಲ್ ಟೂರ್ನಿಯಲ್ಲಿ ತಮ್ಮ ಅದ್ಭುತ ಲಯವನ್ನು ಮುಂದುವರಿಸಿರುವ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಬಾರ್ಸಿಲೋನಾ ಪರ 2 ಗೋಲುಗಳನ್ನು ಬಾರಿಸಿ ಎಸ್ಪನಾಲ್ ತಂಡದ ವಿರುದ್ಧ 2-0 ಗೋಲುಗಳಿಂದ ಜಯ ಸಾಧಿಸಲು ನೆರವಾಗಿದ್ದಾರೆ.
ಶನಿವಾರ ರಾತ್ರಿ ಕ್ಯಾಂಪ್ ನೊವಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 71ನೇ ನಿಮಿಷದಲ್ಲಿ ಬಾರಿಸಿದ ಸೊಗಸಾದ ಫ್ರೀ ಕಿಕ್ ಸೇರಿದಂತೆ ಎರಡು ಗೋಲುಗಳನ್ನು ಮೆಸ್ಸಿ ಬಾರಿಸಿದರು. ಈ ಜಯದೊಂದಿಗೆ ಹಾಲಿ ಚಾಂಪಿಯನ್ ಬಾರ್ಸಿಲೋನಾ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಟ್ಲೆಟಿಕೊಗಿಂತ 10 ಅಂಕಗಳ ಮುನ್ನಡೆ ಗಳಿಸಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಬಾರ್ಸಿಲೋನಾ ಪರ ಮೆಸ್ಸಿ 8 ಗೋಲುಗಳನ್ನು ಬಾರಿಸಿದ್ದಾರೆ. ಲಾಲಿಗಾ ಟೂರ್ನಿಯಲ್ಲಿ 31 ಗೋಲುಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ತಮ್ಮ ತಂಡದ ಲೂಯಿಸ್ ಸ್ವಾರೆಝ್ ಅವರಿಗಿಂತ 13 ಗೋಲುಗಳನ್ನು ಹೆಚ್ಚು ಬಾರಿಸಿದ್ದಾರೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ವಿಲ್ಲಾರೆಲ್‌ನ್ನು ಎದುರಿಸಲಿದೆ. ಈ ವಾರದ ಮಧ್ಯದಲ್ಲಿ ತಮ್ಮ ರಾಷ್ಟ್ರೀಯ ತಂಡ ಅರ್ಜೆಂಟೀನ ಪರ ಆಡಿದ್ದರು ಮೆಸ್ಸಿ. ವೆನಿಝುವೆಲ ವಿರುದ್ಧ ನಡೆದ ಈ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನ ಸೋಲು ಕಂಡಿತ್ತು.