ಮಿಥುನ್ ರೈ ಸ್ಪರ್ಧೆ ಕಾಂಗ್ರೆಸ್ ಅಧಃಪತನಕ್ಕೆ ಸಾಕ್ಷಿ: ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ

Update: 2019-04-01 04:50 GMT

ಪಿಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ, ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಇಲ್ಯಾಸ್ ಮುಹಮ್ಮದ್ ತುಂಬೆ ಈಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ತೆರಳಿ ಒಂದು ಸುತ್ತಿನ ಮತ ಪ್ರಚಾರ ಪೂರ್ಣಗೊಳಿಸಿ ಇದೀಗ ಸಾರ್ವಜನಿಕ ಸಮಾರಂಭಗಳ ಮೂಲಕ ಎರಡನೇ ಸುತ್ತಿನ ಮತ ಯಾಚನೆಗೆ ಸಿದ್ಧತೆ ನಡೆಸಿದ್ದಾರೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಎಸ್‌ಡಿಪಿಐ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಕಾಂಗ್ರೆಸ್-ಬಿಜೆಪಿಯ ಅಬ್ಬರದ ಮಧ್ಯೆಯೂ ತನ್ನದೇ ಓಟ್ ಬ್ಯಾಂಕ್ ಸೃಷ್ಟಿಸಲು ಶ್ರಮಿಸುತ್ತಿರುವ ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದೆ ಭಾಗ ಇಲ್ಲಿದೆ.


ಪ್ರಚಾರ ಕಾರ್ಯ ಹಾಗೂ ಮತದಾರರ ಪ್ರತಿಕ್ರಿಯೆ ಹೇಗಿದೆ?
ಮಾರ್ಚ್ 17ರಂದು ಮಂಗಳೂರಿನಲ್ಲಿ ನಡೆದ ಎಸ್‌ಡಿಪಿಐ ಸಮಾವೇಶದಲ್ಲಿ ನನ್ನ ಅಭ್ಯರ್ಥಿತನವನ್ನು ಘೋಷಿಸಿದ ಕ್ಷಣದಿಂದಲೇ ಪ್ರಚಾರ ಕಾರ್ಯ ಬಿರುಸು ಗೊಳಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲದೆ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಮನೆ ಮತ್ತು ಧಾರ್ಮಿಕ, ಸಾಮಾಜಿಕ ಕೇಂದ್ರಗಳಿಗೂ ಭೇಟಿ ನೀಡಿ ಮತ ಯಾಚಿಸುತ್ತಿದ್ದೇವೆ. ಎಸ್‌ಡಿಪಿಐ ಯಾಕಾಗಿ ಚುನಾವಣಾ ಕಣದಲ್ಲಿದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದೇವೆ. ಯುವ ಮತದಾರರು ಬುದ್ಧಿವಂತರು. ಅವರೀಗ ವಸ್ತುಸ್ಥಿತಿ ಅರ್ಥ ಮಾಡಿ ಕೊಂಡಿದ್ದಾರೆ. ಅವರ ಪ್ರತಿಕ್ರಿಯೆ ಅದ್ಭುತವಾಗಿದೆ. ನಮ್ಮ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗುತ್ತಿವೆ.


ದ.ಕ. ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆ. ಕಳೆದ 28 ವರ್ಷದಿಂದ ಇಲ್ಲಿ ಬಿಜೆಪಿಯೇ ಗೆಲ್ಲುತ್ತಿದೆ. ಈ ಬಾರಿಯ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಹೀಗಿರುವಾಗ ಎಸ್‌ಡಿಪಿಐ ಸ್ಪರ್ಧಿಸಬಾರದಿತ್ತು, ಅದು ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ?
ಕಳೆದ 23 ವರ್ಷಗಳಲ್ಲಿ ಎಸ್‌ಡಿಪಿಐ ಈ ಕ್ಷೇತ್ರದಲ್ಲಿ ಸ್ಪರ್ಧಿಸಿಲ್ಲ. ಆದರೂ ಕಾಂಗ್ರೆಸ್‌ಗೆ ಈ ಕ್ಷೇತ್ರವನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಹೀಗಿರುವಾಗ ಎಸ್‌ಡಿಪಿಐ ಸ್ಪರ್ಧಿಸಿದರೆ ಕಾಂಗ್ರೆಸ್ ಸೋಲುತ್ತದೆ ಎಂಬ ಮಾತಿಗೆ ಅರ್ಥವಿಲ್ಲ. 2018ರ ವಿಧಾನ ಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಎಲ್ಲೂ ಸ್ಪರ್ಧಿಸಿಲ್ಲ. ಆದರೆ, 8ರ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಯಾಕೆ ಸೋಲಾಯಿತು?. ಎಸ್‌ಡಿಪಿಐ ಸ್ಪರ್ಧಿಸಿದರೆ ಬಿಜೆಪಿ ಗೆಲ್ಲುತ್ತದೆ ಎನ್ನುವವರು ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ? ಅಂದಹಾಗೆ, ಕಾಂಗ್ರೆಸ್‌ಗೆ ಬಿಜೆಪಿಯನ್ನು ಎದುರಿಸುವ ಶಕ್ತಿಯೇ ಇಲ್ಲಿಲ್ಲ. ಕಾಂಗ್ರೆಸ್ ಜಾತ್ಯತೀತ ಮುಖವಾಡ ಹೊತ್ತಿದೆಯೇ ವಿನಃ ಅದರಲ್ಲಿ ಜಾತ್ಯತೀತ ತತ್ವದ ಲವಶೇಷವೂ ಇಲ್ಲ. ಎಸ್‌ಡಿಪಿಐ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಅಭಿಪ್ರಾಯ ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ನಾವು ಕೋಮುವಾದಿ ಶಕ್ತಿಗಳು ತಲೆ ಎತ್ತರಬಾರದು ಎಂಬ ಉದ್ದೇಶದಿಂದ ಈ ರಾಜ್ಯದ 27 ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ತ್ಯಾಗಮನೋಭಾವ ಪ್ರಕಟಿಸಿದ್ದೇವೆ. ಆದರೂ ಕಾಂಗ್ರೆಸ್ ನಮ್ಮ ವಿರುದ್ಧ ಆರೋಪ ಮಾಡುತ್ತಿರುವುದು ಆ ಪಕ್ಷದ ಹತಾಶೆಯ ಸಂಕೇತ. ನಿಜವಾಗಿ ಕಾಂಗ್ರೆಸ್ಸೇ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನಬಹುದು.


ಇಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಆಗ್ರಹವಿತ್ತು. ಒಂದು ವೇಳೆ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಎಡಿಪಿಐ ಯಾವ ನಿಲುವು ತಾಳುತ್ತಿತ್ತು?
ಕಾಂಗ್ರೆಸ್ ಮುಸ್ಲಿಮರಿಗೆ ಮಾತ್ರವಲ್ಲ, ಈ ಕ್ಷೇತ್ರದಲ್ಲಿ ಕ್ರೈಸ್ತರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದರೆ ಕೂಡ ನಾವು ಅವರನ್ನು ಬೆಂಬಲಿಸುವ ನಿರ್ಧಾರಕ್ಕೆ ಬರುತ್ತಿದ್ದೆವು. ಈ ಬಗ್ಗೆ ಪಕ್ಷದೊಳಗೆ ಚುನಾವಣಾ ಪೂರ್ವ ಚರ್ಚೆಯೂ ನಡೆದಿತ್ತು. ಕಾಂಗ್ರೆಸ್‌ನಿಂದ ಅಂತಹ ಬೆಳವಣಿಗೆ ಏನಾದರು ಆಗಬಹುದಾ ಎಂದು ನಿರೀಕ್ಷಿಸಿ ಕೆಲಕಾಲ ನಾವು ಕಾದೆವು. ಆದರೆ ಅಂತಹ ಸಾಧ್ಯತೆ ಕ್ಷೀಣ ಎಂದು ಮನವರಿಕೆಯಾಗುತ್ತಲೇ ಪಕ್ಷವು ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿತು. ನಾವೀಗ ನಮ್ಮದೇ ನೆಟ್‌ವರ್ಕ್ ಮೂಲಕ ಎಲ್ಲ ಮತದಾರರ ಮನೆ ಮನ ತಲುಪಲು ಪ್ರಯತ್ನಿಸುತ್ತಿದ್ದೇವೆ.


ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಏನು ಹೇಳುವಿರಿ?
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಕಳೆದ 10 ವರ್ಷಗಳಲ್ಲಿ ಈ ಜಿಲ್ಲೆಯ ಹಿನ್ನಡೆಗೆ ಏನೆಲ್ಲಾ ‘ಕಾಣಿಕೆ’ ನೀಡಿದ್ದಾರೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಲಾಗದ ಒಬ್ಬ ಅಸಮರ್ಥ ಸಂಸದನನ್ನು ಮತ್ತೆ ಆರಿಸಿ ಕಳುಹಿಸುವುದರಲ್ಲಿ ಅರ್ಥವಿಲ್ಲ. ಅವರನ್ನು ಮತ್ತೆ ಗೆಲ್ಲಿಸಿದರೆ ಅದು ಈ ಜಿಲ್ಲೆಗೆ ಅತೀ ದೊಡ್ಡ ನಷ್ಟ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯ ಮೇಲೆ ಕ್ರಿಮಿನಲ್ ಆರೋಪವಿದೆ. ಪಕ್ಷದ ಕಾರ್ಯಕ್ರಮದಲ್ಲೇ ಯುವ ಕಾರ್ಯಕರ್ತನಿಗೆ ಹಲ್ಲೆಗೈದ ಕುಖ್ಯಾತಿ ಮಿಥುನ್‌ರದ್ದು. ಅವರು ಯಾವುದೇ ಸಮಾಜಮುಖಿ ಹೋರಾಟದಲ್ಲಿ ಭಾಗಿಯಾದವರೂ ಅಲ್ಲ. ಅಂತಹ ವ್ಯಕ್ತಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಪಕ್ಷದ ಅಧಃಪತನಕ್ಕೆ ಸಾಕ್ಷಿಯಾಗಿದೆ. ಅವರಿಗಿನ್ನೂ ರಾಜಕೀಯ ಅನುಭವವಿಲ್ಲ. ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಬದಿಗೊತ್ತಿ ಮಿಥುನ್‌ಗೆ ಟಿಕೆಟ್ ನೀಡಿರುವುದರಿಂದ ಹೆಚ್ಚಿನ ಹಿರಿಯ ಕಾಂಗ್ರೆಸ್ಸಿಗರಿಗೆ ಅಸಮಾಧಾನವಿದೆ. ಗುಟ್ಟಾಗಿರುವ ಈ ಅಸಮಾಧಾನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದರೆ ಅಚ್ಚರಿ ಇಲ್ಲ.


ಹೊಸ ಮುಖವನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ?
ಇಲ್ಲವೇ ಇಲ್ಲ. ಕಾಂಗ್ರೆಸ್ ಹೊಸ ಮುಖವನ್ನು ಕಣಕ್ಕಿಳಿಸಿರಬಹುದು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಖಂಡಿತಾ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಲಾರರು. ಈ ಕ್ಷೇತ್ರದಲ್ಲಿ ಬಿಜೆಪಿಗೆ ಎಸ್‌ಡಿಪಿಐ ಮಾತ್ರ ನೇರ ಸ್ಪರ್ಧೆ ನೀಡಲಿದೆ. ನಮ್ಮ ಶಕ್ತಿ ಏನು ಎಂಬುದನ್ನು ನಮ್ಮ ವಿರುದ್ಧ ಅಪಪ್ರಚಾರ ಮಾಡುವ ಕಾಂಗ್ರೆಸ್-ಬಿಜೆಪಿಗರಿಗೆ ತೋರಿಸಿಕೊಡುತ್ತೇವೆ.


ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಆರ್ಭಟದ ಮಧ್ಯೆ ಎಸ್‌ಡಿಪಿಐ ಜನರ ಒಲವು ಗಳಿಸಲು ಸಾಧ್ಯವೇ ?
ಬಿಜೆಪಿ ಭಾವನಾತ್ಮಕವಾಗಿ ಮತದಾರರನ್ನು ವಂಚಿಸುತ್ತಿವೆ. ಕಾಂಗ್ರೆಸ್ ಜಾತ್ಯತೀತದ ಮುಖವಾಡ ಹೊತ್ತು ಕಾರ್ಯಾಚರಿಸುತ್ತಿದೆ. ಬಿಜೆಪಿ ಜನರ ಮನಸ್ಸನ್ನು ಕೆರಳಿಸಿದರೆ, ಕಾಂಗ್ರೆಸ್ ತುಷ್ಠೀಕರಣದ ರಾಜಕಾರಣದಲ್ಲಿ ನಿಸ್ಸೀಮವಾಗಿದೆ. ಆದರೆ ನಾವು ಇವರೆಡರಿಂದಲೂ ಹೊರತಾದ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದೇವೆ. ನಾವು ಪೊಲೀಸ್ ದೌರ್ಜನ್ಯ, ಸಾಮಾಜಿಕ ಸಮಸ್ಯೆ, ಮೂಲಭೂತ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆಯೇ ವಿನಃ ಬೂಟಾಟಿಕೆಯ ರಾಜಕಾರಣ ಮಾಡುತ್ತಿಲ್ಲ. ನಮ್ಮದು ಹೋರಾಟ-ಸಿದ್ಧಾಂತದ ಪಕ್ಷವಾಗಿದೆ. ಹಾಗಾಗಿ ಬಿಜೆಪಿ-ಕಾಂಗ್ರೆಸ್‌ಗಿಂತ ನಾವು ಸದಾ ಭಿನ್ನವಾಗಿರುತ್ತೇವೆ.


ಕಾಂಗ್ರೆಸ್‌ನಂತಹ ಪ್ರಮುಖ ರಾಷ್ಟ್ರೀಯ ಪಕ್ಷಕ್ಕೆ ಎಸ್‌ಡಿಪಿಐ ಪರ್ಯಾಯವಾಗಲು ಸಾಧ್ಯವೇ?
ಸಾಧ್ಯ. 2014ರ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಹನೀಫ್ ಖಾನ್ 27,254 ಮತ ಪಡೆದಿ ದ್ದರು. ಆದರೆ, ಈ ಬಾರಿಯ ಚಿತ್ರಣ ಅದಕ್ಕಿಂತ ಭಿನ್ನವಾಗಿದೆ. ಹೋದಲ್ಲೆಲ್ಲಾ ಮತದಾರರು ಎಸ್‌ಡಿಪಿಐ ಪಕ್ಷದ ಅನಿವಾರ್ಯತೆಯ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಮತ್ತಿತರ ಪಕ್ಷಗಳ ಕಾರ್ಯಕರ್ತರು ಎಸ್‌ಡಿಪಿಐಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಅಧೀರರಾದ ಕಾಂಗ್ರೆಸ್ಸಿಗರು ಎಸ್‌ಡಿಪಿಐ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅಪಪ್ರಚಾರವೇ ಅವರಿಗೆ ಮುಳುವಾಗಲಿದೆ.


 

ಎಸ್‌ಡಿಪಿಐ ಕೇವಲ ಮುಸ್ಲಿಮರ ಪಕ್ಷ ಎಂಬ ಮಾತಿಗೆ ಏನು ಹೇಳುವಿರಿ?
ಎಸ್‌ಡಿಪಿಐಯಲ್ಲಿ ಮುಸ್ಲಿಂ ಕಾರ್ಯಕರ್ತರು ಮತ್ತು ನಾಯಕರು ಅಧಿಕ ಇರಬಹುದು. ಆದರೆ ಎಸ್‌ಡಿಪಿಐ ಮುಸ್ಲಿಮರ ಪಕ್ಷವಲ್ಲ. ನಮ್ಮಲ್ಲಿ ಕ್ರೈಸ್ತರು, ದಲಿತರು ಕೂಡ ಅಧಿಕ ಸಂಖ್ಯೆಯಲ್ಲಿದ್ದಾರೆ. ಪಕ್ಷದ ಮುಂಚೂಣಿ ಸ್ಥಾನದಲ್ಲೂ ಕ್ರೈಸ್ತರು, ದಲಿತರಿದ್ದಾರೆ. ಆದರೆ ಕಾಂಗ್ರೆಸ್ ಮುಸ್ಲಿಮರನ್ನು, ಕ್ರೈಸ್ತರನ್ನು, ದಲಿತರನ್ನು ಮತಬ್ಯಾಂಕ್ ಆಗಿ ಪರಿಗಣಿಸಿದೆಯೇ ವಿನಃ ಈ ಸಮುದಾಯದ ಹಿತಕ್ಕಾಗಿ ಏನೂ ಮಾಡಿಲ್ಲ. 28 ಕ್ಷೇತ್ರಗಳ ಪೈಕಿ 1 ಕಡೆ ಮಾತ್ರ ಸ್ಪರ್ಧಿಸಲು ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ದಕ್ಷಿಣ ಕನ್ನಡ, ಬೀದರ್, ಹಾವೇರಿ, ರಾಯಚೂರು, ಬಿಜಾಪುರದಲ್ಲಿ ಅಧಿಕ ಸಂಖ್ಯೆಯ ಮುಸ್ಲಿಮ್ ಮತದಾರರಿದ್ದರೂ ಕಾಂಗ್ರೆಸ್ ಅಲ್ಲಿ ಸ್ಪರ್ಧಿಸಲು ಮುಸ್ಲಿಮರಿಗೆ ಟಿಕೆಟ್ ನೀಡಿಲ್ಲ. ಪರ್ಯಾಯ ಶಕ್ತಿಯಾಗಿ ಎಸ್‌ಡಿಪಿಐ ಬೆಳೆಯುವುದನ್ನು ಸಹಿಸಲು ಸಾಧ್ಯವಾಗದೆ ನಮ್ಮ ಮೇಲೆ ಗೂಬೆ ಕೂರಿಸುವುದು ಕಾಂಗ್ರೆಸ್‌ನ ಜಾಯಮಾನ.

Writer - ಸಂದರ್ಶನ: ಹಂಝ ಮಲಾರ್

contributor

Editor - ಸಂದರ್ಶನ: ಹಂಝ ಮಲಾರ್

contributor

Similar News