ವಿದ್ಯಾರ್ಥಿಗಳ ಕ್ರಿಯಾತ್ಮಕ ಚಿಂತನೆಗೆ ಪ್ರಾಯೋಗಿಕ ಶಿಕ್ಷಣ ಆಧಾರ ಅಗತ್ಯ: ಎನ್.ವಿನಯ ಹೆಗ್ಡೆ

Update: 2019-04-01 12:10 GMT

ಮಂಗಳೂರು, ಎ.1: ವಿದ್ಯಾರ್ಥಿಗಳು ಕೇವಲ ಕಾಲು ಭಾಗ ಶಿಕ್ಷಣವನ್ನು ಮಾತ್ರವೇ ತರಗತಿಗಳಲ್ಲಿ ಪಡೆಯುತ್ತಾರೆ. ಉಳಿದದ್ದನ್ನು ತರಗತಿಯಿಂದ ಹೊರತಾದ ಪ್ರಾಜೆಕ್ಟ್ ಬೇಸ್ಡ್ ಲರ್ನಿಂಗ್ ಮೂಲಕ ಪ್ರಾಯೋಗಿಕವಾಗಿ ಪಡೆದುಕೊಳ್ಳುತ್ತಾರೆ ಎಂದು ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ತಿಳಿಸಿದ್ದಾರೆ.

ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ ಇಲೆಕ್ಟ್ರಾನಿಕ್ಸ್ ವಿಭಾಗವು ಇಂದು ವಿಭಾಗದ ಹಳೆವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಎಲಿಕ್ಸೀರ್ 2019 ವಿದ್ಯಾರ್ಥಿಗಳ ಮಾದರಿ ವಸ್ತು ಪ್ರದರ್ಶನದ 10ನೇ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಇಂತಹ ಪ್ರಾಯೋಗಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಆ ಶಿಕ್ಷಣವು ಇಂತಹ ವಸುತಿಪ್ರದರ್ಶನ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಪ್ರದರ್ಶಿಸಲು ಇಂತಹ ಕಾರ್ಯಕ್ರಗಳು ಉತತಿಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಹೆಚ್‌ಸಿಎಲ್ ಕಂಪನಿಯ ಜಪಾನ್ ವಿಭಾಗದ ಅಧ್ಯಕ್ಷ ಹರಿಕೃಷ್ಣ ಭಟ್ ಮಾತನಾಡಿ ಜಪಾನ್‌ನಲ್ಲಿ ತಂತ್ರಜ್ಞಾನ ಬೆಳೆಯುತ್ತಿದೆ. ಆದರೆ ಮಾನವಶಕ್ತಿ ಅಥವಾ ಮಾನವ ಸಂಪನ್ಮೂಲದ ಕೊರತೆಯಿದೆ. ಜಪಾನ್‌ನ ಒಟ್ಟು ಜನಸಂಖ್ಯೆಯ 3ನೇ 1 ಪಾಲು 60 ವರ್ಷಕ್ಕೂ ಹೆಚ್ಚಿನ ವಯಸ್ಕರು. ಇಂತಹ ಸಂದರ್ಭದಲ್ಲಿ ಭಾರತ ಸರ್ಕಾರ ಹಾಗೂ ಜಪಾನ್ ಸರ್ಕಾರ ಒಂದು ಒಪ್ಪಂದಕ್ಕೆ ಸಹಿ ಹಾಕಿದೆ. 2022ನೇ ಇಸವಿಯ ಒಳಗಾಗಿ ಸುಮಾರು 5ಲಕ್ಷ ಇಂಜಿನಿಯರ್‌ಗಳನ್ನು ಜಪಾನ್ ದೇಶಕ್ಕೆ ಉದ್ಯೋಗಾವಕಾಶದೊಂದಿಗೆ ಕಳುಹಿಸುವ ನಿರೀಕ್ಷೆ ಇದೆ. ಇದರಿಂದ ಎರಡು ದೇಶಗಳ ಭಾಂದವ್ಯ ಹಾಗೂ ತಂತ್ರಜ್ಞಾನದ ಬೆಳವಣಿಗೆ ಕ್ಷಿಪ್ರಗತಿಯಲ್ಲಿ ಸಾಗಲಿದೆ ಎಂದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರಂಜನ್ ಎನ್ ಚಿಪ್ಳೂಣ್ಕರ್ ಸುಮಾರು 100 ಕ್ಕೂ ಹೆಚ್ಚು ಮಾದರಿಪ್ರದರ್ಶನವನ್ನು ಇಂದು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಹೆಚ್ಚಿನವರೂ ಪ್ರಥಮ ವರ್ಷದ ಬಿ.ಇ ವಿದ್ಯಾರ್ಥಿಗಳಾಗಿದ್ದಾರೆ. ನಿಟ್ಟೆ ಸಂಸ್ಥೆಯ ಇಲೆಕ್ಟ್ರಿಕಲ್ ವಿಭಾಗದಲ್ಲಿ ಕಲಿತ ಸುಮಾರು 99 ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಬೆಂಬಲಿಸುವ ನಿಟ್ಟಿನಲ್ಲಿ ಹಳೆವಿದ್ಯಾರ್ಥಿಗಳು ಉತ್ತಮ ಕೊಡುಗೆ ಸಲ್ಲಿಸುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಐ. ರಮೇಶ್ ಮಿತ್ತಂತಾಯ ಹಾಗೂ ಡಾ. ಶ್ರೀನಿವಾಸ ರಾವ್ ಬಿ ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಲಿಕ್ಸೀರ್ 2019 ವಸ್ತುಪ್ರದರ್ಶನದ ಸಂಯೋಜಕ ಡಾ. ಸೂರ್ಯನಾರಾಯಣ ಕೆ ಸ್ವಾಗತಿಸಿದರು. ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ. ನಾಗೇಶ್ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಲಿಕ್ಸೀರ್ ವಿದ್ಯಾರ್ಥಿ ಸಂಯೋಜಕ ಅನೂಪ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ನಿಧಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಲಕ್ಷ್ಮೀ ಪೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News