ಮೋದಿ ಶ್ರೀಮಂತರಿಗೆ ರಕ್ಷಣೆ ನೀಡುವ ಚೌಕೀದಾರ: ದಿನೇಶ್ ಗುಂಡೂರಾವ್

Update: 2019-04-02 08:53 GMT

ಮಂಗಳೂರು, ಎ.2: ಪ್ರಧಾನಿ ನರೇಂದ್ರ ಮೋದಿ ದೇಶದ ಚೌಕೀದಾರ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ದೇಶದ ಸಂಪತ್ತನ್ನು ಲೂಟಿ ಹೊಡೆದ ಶ್ರೀಮಂತರಿಗೆ ರಕ್ಷಣೆ ನೀಡುವ ಚೌಕೀದಾರ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಗಳಲ್ಲಿ ಲೋಕಪಾಲವನ್ನು ನೇಮಕ ಮಾಡಲಾಗದ ಪ್ರಧಾನಿನ ನರೇಂದ್ರ ಮೋದಿಯವರು ಚುನಾವಣೆಯ ಸಂದರ್ಭದಲ್ಲಿ ನೇಮಕ ಮಾಡುವ ಮೂಲಕ ತಪ್ಪು ಎಸಗಿದ್ದಾರೆ ಎಂದರು.

ಐದು ವರ್ಷಗಳ ಹಿಂದೆ ದೇಶದಲ್ಲಿ ಬದಲಾವಣೆ ಬಯಸಿ ಜನತೆ ಬಿಜೆಪಿಗೆ ಅವಕಾಶ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆಯ ಸಂದರ್ಭ ನೀಡಿದ್ದ ಯಾವುದೇ ಈಡೇರಿಕೆಗಳನ್ನು ಮೋದಿ ನೇತೃತ್ವದ ಸರಕಾರ ಈಡೇರಿಸಿಲ್ಲ. ಬದಲಾಗಿ ಆರ್ಥಿಕ ಕ್ಷೇತ್ರ ಕುಸಿಯುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಜಿಡಿಪಿ ಅಭಿವೃದ್ಧಿ ಸಂಶಯಾಸ್ಪದವಾಗಿದೆ. ಆದರೆ ಲಾಭ ಆಗಿದ್ದು ಮಾತ್ರ ಶ್ರೀಮಂತರಿಗೆ. ಹಾಗಾಗಿ ಈಗ ಮೋದಿಯವರು ತಮ್ಮ ಸಾಧನೆ ಬಗ್ಗೆ, ತಮ್ಮ ಅವಧಿಯಲ್ಲಿ ಮಾಡಿರುವ ಅಚ್ಚೇ ದಿನಗಳ ಬಗ್ಗೆ ಪ್ರಸ್ತಾಪಿಸದೆ, ಮತೀಯ ಭಾವನೆಗಳ ಮೂಲಕ ಜನರನ್ನು ಕೆರಳಿಸುತ್ತಿದ್ದಾರೆ. ಹಿಂದುತ್ವ, ಕೋಮುವಾದದ ಆಧಾರದಲ್ಲಿ ವಿಷವನ್ನು ಜನರಲ್ಲಿ ಬಿತ್ತುತ್ತಾ, ವಾಸ್ತವವನ್ನು ಕಡೆಗಣಿಸುತ್ತಿದ್ದಾರೆ. ಒಟ್ಟಿನಲ್ಲಿ ದೇಶವನ್ನು ಇಬ್ಭಾಗ ಮಾಡುವ ರಾಜಕಾರಣವನ್ನು ಪ್ರಧಾನಿ ಯಾದವರು ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಕಾಂಗ್ರೆಸ್‌ನಿಂದ ಇಂದು ಅಧಿಕೃತವಾಗಿ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಅವುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ನಾವು ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳುವುದಿಲ್ಲ. ಆದರೆ ದೇಶದ ಶೇ. 20ರಷ್ಟು ಅರ್ಹ ಬಡವರಿಗೆ ಮಾಸಿಕ 6000 ರೂ.ನಂತೆ ವಾರ್ಷಿಕ 72,000 ರೂ.ಗಳನ್ನು ಹಾಕಲಿದ್ದೇವೆ. ಉದ್ಯೋಗ ಖಾತರಿಯಡಿ ದಿನಗಳನ್ನು 100ರಿಂದ 150ಕ್ಕೆ ಏರಿಕೆ ಮಾಡಲಿದ್ದೇವೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ. ಅವರು ತಮ್ಮ ವಿದ್ಯಾಭ್ಯಾಸ, ತಮ್ಮ ವಿವಾಹದ ಕುರಿತಂತೆಯೂ ಸುಳ್ಳು ಹೇಳಿದ್ದಾರೆ. ಆದರೆ ಪಕ್ಷದ ನಾಯಕ ರಾಹುಲ್‌ಗಾಂಧಿಗೆ ಸುಳ್ಳು ಹೇಳುವ ಅಗತ್ಯವಿಲ್ಲ. ದೊಡ್ಡ ಮಾಧ್ಯಮ ಸಂಸ್ಥೆಗಳನ್ನು ತನ್ನ ಹತೋಟಿಯಲ್ಲಿಡುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಪತ್ರಕರ್ತರಿಂದ ಪ್ರಶ್ನೆಗಳನ್ನು ಎದುರಿಸುವ ತಾಕತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕ ಜೆ.ಆರ್. ಲೋಬೋ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಕಣಚೂರು ಮೋನು, ವಿನಯ್ ರಾಜ್, ಸಂತೋಷ್ ಶೆಟ್ಟಿ,. ತಾರನಾಥ ಕಳ್ಳಿಗೆ, ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News