ಲಾರಿ ದರೋಡೆ ಪ್ರಕರಣ ಭೇದಿಸಿದ ಉಪ್ಪಿನಂಗಡಿ ಪೊಲೀಸರು: ದೂರು ನೀಡಿದ ಚಾಲಕನೇ ವಶಕ್ಕೆ

Update: 2019-04-03 11:33 GMT

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗುಡ್ಡೆ ಎಂಬಲ್ಲಿ ನಡೆದ ಲಾರಿ ದರೋಡೆ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ತಾನೇ ಸ್ವತಹ ಲಾರಿ ದರೋಡೆ ಮಾಡಿ ಕಥೆ ಸೃಷ್ಟಿಸಿದ ಆರೋಪಿ ಲಾರಿ ಚಾಲಕ ಅಂಬರೀಶ್‍ನನ್ನು ಬಂಧಿಸಿದ್ದಾರೆ.

ಮಾ.25ರಂದು ಶಿರಾಡಿ ಗುಡ್ಡೆ ಎಂಬಲ್ಲಿ ಏರು ರಸ್ತೆಯಲ್ಲಿ ಲಾರಿ ಚಲಾಯಿಸುತ್ತಿದ್ದ ಸಂದರ್ಭ ಮಧ್ಯರಾತ್ರಿ ಹಿಂದಿನಿಂದ ಬಂದ ಕಾರು ತಾನು ಚಲಾಯಿಸುತ್ತಿದ್ದ ಲಾರಿಗೆ ಅಡ್ಡವಿಟ್ಟು ಕಾರಿನಲ್ಲಿದ್ದ ಇಬ್ಬರು ಇಳಿದು ಲಾರಿಗೆ ಹತ್ತಿ ನನಗೆ ಹಲ್ಲೆ ನಡೆಸಿ, ನೈಲಾನ್ ಹಗ್ಗದಿಂದ ತನ್ನ ಕೈಕಾಲುಗಳನ್ನು ಕಟ್ಟಿ, ಖಾರದ ಪುಡಿಯನ್ನು ಕಣ್ಣಿಗೆ ಎರಚಿ ತನ್ನಲ್ಲಿದ್ದ 5,200 ರೂ. ನಗದು ಹಾಗೂ 2,000 ರೂ. ಮೌಲ್ಯದ ಮೊಬೈಲ್ ಹಾಗೂ ಲಾರಿಯಲ್ಲಿದ್ದ ಸೊತ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಲಾರಿ ಚಾಲಕ ಅಂಬರೀಷ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದ.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಪ್ಪಿನಂಗಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಪ್ರಕರಣದಲ್ಲಿ ದೂರು ನೀಡಿದವನೇ ಆರೋಪಿ ಎಂಬುದಾಗಿ ತಿಳಿದು ಬಂದಿದ್ದು, ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಕರಣದ ನೈಜಾಂಶ ಬೆಳಕಿಗೆ ಬಂತು.

ಪಾಂಡವರ ಪುರ ತಾಲೂಕಿನ ಸೀತಾಪುರದವನಾದ ಅಂಬರೀಷ್ ಲಾರಿ ಮಾಲಕನಾಗಿದ್ದು, ತನ್ನ ಲಾರಿಯಲ್ಲಿ ತಾನೇ ಚಾಲಕನಾಗಿ ದುಡಿಯುತ್ತಿದ್ದ. ಈ ಲಾರಿಯಲ್ಲಿ ಹಿಂದೂಸ್ತಾನ ಲಿವರ್ ಕಂಪನಿಯಿಂದ ಸಾಬೂನು, ಶ್ಯಾಂಪ್ಯೂ, ಟೀ ಪುಡಿ, ಕಾಫಿ ಪುಡಿಯನ್ನು ಡೆಲಿವರಿ ಮಾಡುತ್ತಿದ್ದ. ವಿಪರೀತ ಸಾಲ ಹೊಂದಿದ್ದ ಈತ ಲಾರಿಯಲ್ಲಿದ್ದ ಪಾರ್ಸೆಲ್‍ಗಳನ್ನು ಕದ್ದು ಮಾರಾಟ ಮಾಡಿ, ತನ್ನ ಕೈಕಾಲುಗಳಿಗೆ ತಾನೇ ಹಗ್ಗ ಕಟ್ಟಿಕೊಂಡು ದರೋಡೆಯ ನಾಟಕವಾಡಿದ್ದ. ಈತನನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು ಸೊತ್ತುಗಳನ್ನು ಮಾರಾಟ ಮಾಡಿ ತನ್ನಲ್ಲಿಟ್ಟುಕೊಂಡಿದ್ದ  51,500 ರೂ. ವನ್ನು ಸ್ವಾಧೀನ ಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ  ಹೆದ್ದಾರಿ ದರೋಡೆ ಪ್ರಕರಣ ಪತ್ತೆ ಕಾರ್ಯದಲ್ಲಿ ಉಪ್ಪಿನಂಗಡಿ  ಪೊಲೀಸ್ ಠಾಣಾಧಿಕಾರಿ ಪ್ರೊಬೆಶನರಿ ಸಹಾಯಕ ಪೊಲೀಸ್ ಅಧೀಕ್ಷ ಪ್ರದೀಪ್ ಗುಂಟಿ ಐಪಿಎಸ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಡಿ. ಮಂಜುನಾಥ್ , ಪಿಎಸ್‍ಐ ನಂದಕುಮಾರ್ ಎಂ. ಎಂ, ಪ್ರೊಬೆಶನರಿ ಪಿಎಸ್‍ಐ ಪವನ್ ನಾಯಕ್ , ಎಎಸ್‍ಐ ರುಕ್ಮ ನಾಯ್ಕ   ಸಿಬ್ಬಂದಿಗಳಾದ ಹರಿಶ್ಚಂದ್ರ, ದೇವದಾಸ್, ಶೇಖರ್ ಗೌಡ, ಇರ್ಷಾದ್, ಜಗದೀಶ್, ಶ್ರೀಧರ್, ಮನೋಹರ್ ಹಾಗೂ ನೆಲ್ಯಾಡಿ ಹೊರ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News