ವಯನಾಡ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಯುದ್ಧ ಸಾರಿದ ಎಡರಂಗ

Update: 2019-04-03 11:37 GMT

ವಯನಾಡ್, ಎ.3: ಅಮೇಠಿ ಹೊರತಾಗಿ ಕೇರಳದ ವಯನಾಡ್ ನಲ್ಲೂ ಲೋಕಸಭಾ ಚುನಾವಣೆ ಸ್ಪರ್ಧಿಸಲು ನಿರ್ಧರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್  ಗಾಂಧಿ  ರಾಜ್ಯದ ಆಡಳಿತ ಸಿಪಿಎಂ ನಡೆಸುವ ವ್ಯವಸ್ಥಿತ ಪ್ರಚಾರಕ್ಕೆ ಸರಿಸಾಟಿಯಾಗಿ ನಿಲ್ಲಬಹುದೇ ಎಂಬ ಪ್ರಶ್ನೆಯಿದೆ.

ರಾಹುಲ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂಬ ಘೋಷಣೆಯಾದಾಗಿನಿಂದ ಅಲ್ಲಿಗೆ ಸಾಕಷ್ಟು ಹಣ, ಗಮನ ಹಾಗೂ ಕಾರ್ಯಕರ್ತರ  ಆಗಮನವಾಗುತ್ತಿದೆಯೆನ್ನುತ್ತಿವೆ ಮೂಲಗಳು. ಸಿಪಿಎಂ ತಳಮಟ್ಟದಲ್ಲಿ ರೂಪಿಸುವ ಹೋರಾಟಗಳು ಈ ಹಿಂದೆಯೂ ಫಲಿತಾಂಶಗಳನ್ನು ಬದಲಿಸಿರುವ ಉದಾಹರಣೆಗಳಿವೆ. ಸಿಪಿಎಂ ಈಗಾಗಲೇ ವಯನಾಡ್ ನಲ್ಲಿ ದೊಡ್ಡ ಮಟ್ಟದ ರ್ಯಾಲಿಗಳನ್ನು ಆಯೋಜಿಸಲು ಯೋಚಿಸುತ್ತಿದ್ದು ಅಲ್ಪಸಂಖ್ಯಾತ ಮುಸ್ಲಿಮರು ಮತ್ತು ಕ್ರೈಸ್ತರನ್ನು ಓಲೈಸಲು ಎಲ್ಲಾ ಕಸರತ್ತುಗಳನ್ನು ನಡೆಸುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ರಾಷ್ಟ್ರೀಯ ನಾಯಕರುಗಳಾದ ಸೀತಾರಾಂ ಯಚೂರಿ ಹಾಗೂ ಪ್ರಕಾಶ್ ಕಾರಟ್ ಅವರ ಹಲವು ರ್ಯಾಲಿಗಳನ್ನು ಆಯೋಜಿಸಲು ಪಕ್ಷ ಚಿಂತಿಸುತ್ತಿದೆ.

ಮಾಜಿ ಸಿಎಂ ಹಾಗೂ ಪ್ರಭಾವಿ ಕಮ್ಯುನಿಸ್ಟ್ ನಾಯಕ 96 ವರ್ಷದ ವಿ.ಎಸ್. ಅಚ್ಯುತಾನಂದನ್ ಅವರನ್ನೂ ರ್ಯಾಲಿಗಳಲ್ಲಿ ಹಾಜರಿರುವಂತೆ ಪಕ್ಷ ಮನವಿ ಮಾಡಿದೆ. ವಯಸ್ಸಾಗಿರುವ ಹೊರತಾಗಿಯೂ ಅಚ್ಯುತಾನಂದನ್ ಅವರ ವಾಕ್ಚಾತುರ್ಯ  2016 ಚುನಾವಣೆಗಳಲ್ಲಿ ಪಕ್ಷಕ್ಕೆ 140ರಲ್ಲಿ 90 ಸ್ಥಾನಗಳನ್ನು ಗೆಲ್ಲಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತೆಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

“ನಾವು ರಾಹುಲ್ ಗಾಂಧಿಯನ್ನು ಸೋಲಿಸಿದರೆ ಭಾರತದಲ್ಲಿ ಎಲ್ಲರೂ ಎದ್ದು ನಿಂತು ನಮಗೆ ಶುಭಾಶಯ ಹೇಳುತ್ತಾರೆ. ಇತಿಹಾಸ ಸೃಷ್ಟಿಸಲು ಇದು ಸಕಾಲ. ನಮ್ಮಂತಹ ಕಮ್ಯುನಿಸ್ಟರು ಕಾಣಿಸದ ಕ್ಷೇತ್ರಗಳಿಂದ ಮಾತ್ರ ಅವರು ಇಲ್ಲಿಯ ತನಕ ಹೋರಾಡಿದ್ದಾರೆ. ಈಗ ಅವರು ನಮ್ಮ ಬಳಿ ಬಂದಿದ್ದಾರೆ. ಕಮ್ಯುನಿಸ್ಟರು ಒಂದು ಭಿನ್ನ ಪಕ್ಷವೆಂದು ಹೇಳಿಕೊಂಡು ಅವರು ಈ ಜಾಗ ಬಿಡಬೇಕಿದೆ'' ಎಂದು ಮಂಗಳವಾರ ನಡೆದ ಪಕ್ಷ ಕಾರ್ಯಕರ್ತರ ಸಭೆಯಲ್ಲಿ ಕೇರಳ ಸಿಪಿಎಂ ಮುಖ್ಯಸ್ಥ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ.

ಅವರ ಸೂಚನೆಯಂತೆ ಪಕ್ಷದ ಕಾರ್ಯಕರ್ತರು ಮುಖ್ಯವಾಗಿ ಮಹಿಳೆಯರು ಪ್ರತಿ ದಿನ ಕನಿಷ್ಠ 10 ಮನೆಗಳಿಗೆ ಪ್ರಚಾರ ನಿಮಿತ್ತ ಭೇಟಿಯಾಗಬೇಕು. ಇದರ ಹೊರತಾಗಿ ಇನ್ನೊಂದು ತಂಡ ನಾಲ್ಕು ದಿನಗಳಲ್ಲಿ ತಲಾ 50 ಮನೆಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಲಿದೆ. ಹಿಂದುಗಳು ಹಾಗೂ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿರುವ ಹಾಗೂ ಈ ತಿಂಗಳಲ್ಲಿ ಬರಲಿರುವ ವಿಷು ಹಾಗೂ ಈಸ್ಟರ್ ಸಂದರ್ಭ ಪಕ್ಷ ದೊಡ್ಡ ಮಟ್ಟದ ಆಚರಣೆಗಳನ್ನು ನಡೆಸಲು ಚಿಂತಿಸಿದೆ,

ವಯನಾಡ್ ನ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಸಿಪಿಎಂ ಅಧಿಕಾರದಲ್ಲಿದೆ. ಆದರೆ  ಈ ಲೋಕಸಭಾ ಕ್ಷೇತ್ರದಲ್ಲಿ ವಯನಾಡ್ ಗಿಂತ ಮಲಪ್ಪುರಂ ಜಿಲ್ಲೆಯ ಹೆಚ್ಚು ಜನರಿದ್ದಾರೆ. ಮುಸ್ಲಿಂ ಬಾಹುಳ್ಯದ ಮಲಪ್ಪುರಂನಲ್ಲಿ ಕಾಂಗ್ರೆಸ್ ಮಿತ್ರ ಪಕ್ಷ ಐಯುಎಂಎಲ್  ಪ್ರಮುಖ ಶಕ್ತಿಯಾಗಿದೆ. ಈ ರೀತಿ ಹೇಳುವುದಾದರೆ ವಯನಾಡ್ ಕಾಂಗ್ರೆಸ್ ಭದ್ರಕೋಟೆ ಎನ್ನಬಹುದು.

ಕಳೆದ ಬಾರಿ ಇಲ್ಲಿಂದ ಕಾಂಗ್ರೆಸ್ ಪಕ್ಷದ ಶಾನವಾಝ್ ಗೆದ್ದಿದ್ದರು, ಅವರು ಕಳೆದ ವರ್ಷ ನಿಧನರಾಗಿದ್ದಾರೆ. ಆದರೆ 2009ರಲ್ಲಿ 1.5 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಅವರು ಕಳೆದ ಬಾರಿ 20,000 ಮತಗಳ ಅಂತರದಿಂದಷ್ಟೇ ಗೆದ್ದಿದ್ದರು. ಆದರೆ ಆಗ ಅವರ ವಿರುದ್ಧ ಆಡಳಿತ ವಿರೋಧಿ ಅಲೆಯಿತ್ತು.

ಏನೇ ಆಗಲಿ ವಯನಾಡ್ ನಲ್ಲಿ ಸಿಪಿಎಂ ರಾಹುಲ್ ಅವರಿಂದ ಕಠಿಣ ಹೋರಾಟ ಎದುರಿಸಲಿದೆ ಎಂಬುದಂತೂ ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News