‘ನಮೋ ಟಿವಿ’ ಕಾರ್ಯನಿರ್ವಹಣೆಯಲ್ಲಿ ನಾವು ಭಾಗಿಯಾಗಿಲ್ಲ: ಚಾನೆಲ್ ನ ಮೂಲ ಪ್ರವರ್ತಕ

Update: 2019-04-03 17:09 GMT

ಹೊಸದಿಲ್ಲಿ, ಎ. 3: ‘ನಮೋ ಟಿ.ವಿ.’ ಕಾರ್ಯ ನಿರ್ವಹಣೆಯಲ್ಲಿ ತಾನಾಗಲಿ ಅಥವಾ ತನ್ನ ಕಂಪೆನಿಯಾಗಲಿ ಭಾಗಿಯಾಗಿಲ್ಲ ಎಂದು ನಮೋ ಟಿ.ವಿ. ಚಾನೆಲ್ ಅನ್ನು ಮೊದಲ ಬಾರಿಗೆ ಪ್ರಸಾರ ಮಾಡಿದ ಕಂಪೆನಿಯ ಮೂಲ ಪ್ರವರ್ತಕರು ಹೇಳಿದ್ದಾರೆ.

 ನಾವು ಈ ಹಿಂದೆ ನಮೋ ಟಿವಿಯ ಪ್ರಸಾರದಲ್ಲಿ ಭಾಗಿಯಾಗಿದ್ದೆವು. ನಾವು ಈಗ ಅದನ್ನು ನಡೆಸುತ್ತಿಲ್ಲ ಎಂದು ಕಂಪೆನಿಯ ಪ್ರವರ್ತಕ ಸುಜಯ್ ಮೆಹ್ತಾ ಹೇಳಿದ್ದಾರೆ. ನಮೋ ಟಿ.ವಿ. ನಡೆಸುವುದನ್ನು ಯಾವಾಗ ಹಾಗೂ ಯಾರಿಗೆ ವರ್ಗಾಯಿಸಿದ್ದಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೆಹ್ತಾ, “ನಾನು ಅದರಲ್ಲಿ ಭಾಗಿಯಾಗಿಲ್ಲ. ನನಗೆ ಏನೂ ಗೊತ್ತಿಲ್ಲ” ಎಂದಿದ್ದಾರೆ.

 ನಮೋ ಟಿ.ವಿ.ಯ ಮಾಲಿಕತ್ವವನ್ನು ಬಿಜೆಪಿ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ, ಪಕ್ಷದ ಅಧಿಕೃತ ಸಾಮಾಜಿಕ ಜಾಲ ತಾಣದ ಪೋಸ್ಟ್ ನರೇಂದ್ರ ಮೋದಿ ಅವರ ಭಾಷಣವನ್ನು ನಮೋ ಚಾನೆಲ್‌ನಲ್ಲಿ ನೋಡಿ ಎಂದು ಜನರನ್ನು ಆಗ್ರಹಿಸಿತ್ತು. ಹೋಮಿಯೋಪತಿ ವೈದ್ಯರಾಗಿರುವ ಮೆಹ್ತಾ ನ್ಯೂ ಹೋಪ್ ಇನ್‌ಫೋಟೈನ್‌ಮೆಂಟ್ ಇನ್‌ಕಾರ್ಪೊರೇಟೆಡ್ ಎಂದು ಕರೆಯಲಾಗುವ ಕಂಪೆನಿಯ ಮೂಲಕ 2012ರಲ್ಲಿ ನಮೋ ಟಿವಿಯನ್ನು ಪ್ರಸಾರ ಮಾಡಿದ್ದರು.

ಗುಜರಾತ್‌ನಲ್ಲಿ ಚುನಾವಣೆ ನಡೆಯುವ ಎರಡು ತಿಂಗಳಿಗಿಂತ ಹಿಂದೆ ಅಂದರೆ, 2012 ಅಕ್ಟೋಬರ್‌ನಲ್ಲಿ ಈ ಚಾನೆಲ್ ಮೊದಲ ಬಾರಿಗೆ ಪ್ರಸಾರವಾಗಿತ್ತು. ಮೆಹ್ತಾ ಹೋಮಿಯೋಪತಿ ಕ್ಲಿನಿಕ್ ನಡೆಸುತ್ತಿದ್ದ ಅಹ್ಮಾದಾಬಾದ್‌ನ ವಸ್ತ್ರಾಪುರ ಪ್ರದೇಶದ ವಿಳಾಸದಲ್ಲಿ ಕಂಪೆನಿಯನ್ನು ನೋಂದಣಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News