2,000 ವರ್ಷಗಳ ಹಳೆಯ ಫಾಸ್ಟ್‌ಫುಡ್ ಕೌಂಟರ್ ಪತ್ತೆ !

Update: 2019-04-03 18:32 GMT

ಥರ್ಮೋಪೋಲಿಯಾ ಎಂದು ಕರೆಯಲಾಗುವ 2000 ವರ್ಷಗಳ ಹಳೆಯ ಫಾಸ್ಟ್ ಫುಡ್ ಸ್ಟಾಂಡ್ ರೋಮ್‌ನ ಪೊಂಪೈಯಲ್ಲಿ ಪತ್ತೆಯಾಗಿದೆ. ಥರ್ಮೋಪೋಲಿಯಾ ಅಂದರೆ ಮನೆಯಲ್ಲಿ ಅಡುಗೆ ಪಾತ್ರೆಗಳು ಅಥವಾ ಸೌಲಭ್ಯಗಳು ಇಲ್ಲದ ಪೊಂಪೈಯ ತಳವರ್ಗದ ನಿವಾಸಿಗಳು ತಮಗೆ ಬೇಕಾದುದನ್ನು ತಿನ್ನಲು, ಕುಡಿಯಲು ಆಗಮಿಸುವ ಪಾಸ್ಟ್ ಫುಡ್ ಕೇಂದ್ರ.

ಟ್ರಕ್‌ಗಳಲ್ಲಿ ಆಹಾರ ರವಾನೆ, ತಿನಿಸುಗಳನ್ನು ಕಟ್ಟಿಕೊಂಡು ಹೋಗುವುದು ಇತ್ತೀಚೆಗೆ ಸಾಮಾನ್ಯ. ಆದರೆ, ಈ ಪ್ರವೃತ್ತಿ ಆಗಿನ ಪೊಂಪೈ ನಿವಾಸಿಗಳಲ್ಲೇ ಇತ್ತು. ಪ್ರಾಚೀನ ರೋಮ್‌ನ ಪೊಂಪೈ ನಗರದಾದ್ಯಂತ ಸುಮಾರು 150 ಥರ್ಮೋಪೋಲಿಯಾ ಅಥವಾ ಸ್ನಾಕ್ ಬಾರ್‌ಗಳನ್ನು ಪುರಾತತ್ವ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ತಮ್ಮ ಸ್ವಂತದ ಅಡುಗೆ ಪಾತ್ರೆಗಳು ಹಾಗೂ ಸೌಲಭ್ಯಗಳು ಇಲ್ಲದ ಬಡ ಪೊಂಪೈ ಜನರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ತಮಗೆ ಬೇಕಾದುದನ್ನು ಸೇವಿಸುತ್ತಿದ್ದರು. ಆದರೆ ಮೇಲ್ವರ್ಗದವರು ಇಂತಹ ಸಾರ್ವಜನಿಕ ಆಹಾರ ಕೇಂದ್ರಗಳಿಂದ ದೂರವಿರುತ್ತಿದ್ದರು.


ಪೊಂಪೈ ಪುರಾತತ್ವ ಪಾರ್ಕ್‌ನ ಉತ್ತರದ 54 ಎಕರೆ ನಿವೇಶನದಲ್ಲಿ 2,000 ವರ್ಷಗಳ ಹಳೆಯ ಈ ಸ್ಮಾರಕಗಳು ಕಂಡು ಬಂದಿವೆ. ಆ ಕಾಲದಲ್ಲಿ ಇದು ಉದ್ಯಮ ಕೇಂದ್ರವಾಗಿ ಅಭಿವೃದ್ಧಿ ಹೊಂದಿತ್ತು. ಇಲ್ಲಿ ಬ್ರೆಡ್‌ನೊಂದಿಗೆ ಉಪ್ಪು ಹಚ್ಚಿದ ಮೀನು, ಬೇಳೆಕಾಳು, ಬೇಯಿಸಿದ ಗಿಣ್ಣು ಹಾಗೂ ಮಸಾಲೆಯುಕ್ತ ವೈನ್ ಅನ್ನು ನೀಡಲಾಗುತ್ತಿತ್ತು. ಜ್ವಾಲಾಮುಖಿಯ ಸ್ಫೋಟದಿಂದಾಗಿ ಇಲ್ಲಿದ್ದ ಸಾವಿರಾರು ಜನರು ಅಳಿದಿರಬಹುದೆಂದು ಪುರಾತತ್ವ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಇದರ ಭಾವಚಿತ್ರವನ್ನು ಫೆಬ್ರವರಿಯಲ್ಲಿ ಮೊದಲ ಬಾರಿಗೆ ಶೇರ್ ಮಾಡಲಾಗಿತ್ತು. ಆನಂತರ ಈ ಸಂಶೋಧನೆಯ ಬಗ್ಗೆ ಸಾಕಷ್ಟು ಮಾಹಿತಿ ಹೊರಬಂದಿದೆ.
 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News