ಮುಲ್ಕಿ ಕಿಲ್ಪಾಡಿ ಬೆಥನಿ ಕಾಲೇಜಿನ ಆವರಣದಲ್ಲಿ ಚಿರತೆ ಪತ್ತೆ

Update: 2019-04-04 17:48 GMT

ಮುಲ್ಕಿ: ಇಲ್ಲಿಗೆ ಸಮೀಪದ ಕಿಲ್ಪಾಡಿ ಪಂಚಾಯತಿ ಬಳಿಯಲ್ಲಿರುವ ಬೆಥನಿ ಕಾಲೇಜಿನ ಆವರಣದ ತೋಟದಲ್ಲಿ ಚಿರತೆ ಹಾಗೂ ಎರಡು ಮರಿಗಳು ಪತ್ತೆಯಾಗಿದ್ದು ಸ್ಥಳೀಯರನ್ನು ಭಯಭೀತರನ್ನಾಗಿಸಿದೆ.

ಗುರುವಾರ ಮದ್ಯಾಹ್ನ ಚಿರತೆ ತನ್ನ ಎರಡು ಮರಿಗಳೊಂದಿಗೆ ಕಾಲೇಜಿನ ಆವರಣದಲ್ಲಿರುವ ತೋಟದಲ್ಲಿ ಕಂಡು ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಬೆಥನಿ ಕಾಲೇಜಿನ ಹಿಂದುಗಡೆ ಎಕರೆಗಟ್ಟಲೆ ಗುಡ್ಡೆ ಪ್ರದೇಶವಿದ್ದು ಹಿಂದಿನಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಚಿರತೆ ಮತ್ತು ಮರಿಗಳನ್ನು ಕಣ್ಣಾರೆ ಕಂಡಿದ್ದು ಭಯಭೀತರಾಗಿ ಸಂಜೆ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್‍ರವರಿಗೆ ತಿಳಿಸಿದ್ದು ಕೂಡಲೇ ಪಡುಪಣಂಬೂರು ಪಂಚಾಯತಿ ಸದಸ್ಯ ವಿನೋದ್ ಸಾಲ್ಯಾನ್ ಜೊತೆ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಕತ್ತಲೆಯಾದ ಕಾರಣ  ಚಿರತೆಯನ್ನು ಓಡಿಸುವ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ .ಚಿರತೆ ಪತ್ತೆಯಾದ ಬಗ್ಗೆ ವಿನೋದ್ ಸಾಲ್ಯಾನ್ ಮೂಡಬಿದ್ರೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದಾಗ ಅರಣ್ಯಾಧಿಕಾರಿಗಳು ಕಳೆದ ಮೂರು ತಿಂಗಳ ಹಿಂದೆ ಇದೇ ಪರಿಸರದಲ್ಲಿ ಚಿರತೆ ಪತ್ತೆಯಾಗಿದ್ದನ್ನು ತಿಳಿಸಿದ್ದು ಬಳಿಕ ನಾಪತ್ತೆಯಾಗಿದ್ದವು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಕಾಲೇಜು ಆವರಣದಲ್ಲಿ ಚಿರತೆ ಪತ್ತೆಯಾಗಿರುವ ಬಗ್ಗೆ ಕಾಲೇಜಿನಲ್ಲಿ ಭಯಭೀತ ವಾತಾವರಣ ಸೃಷ್ಠಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News