ಮೈತ್ರಿ ಸರಕಾರದ ಜನಪರ ಯೋಜನೆಗಳು ಮಧ್ವರಾಜ್ ಗೆಲುವಿಗೆ ಶ್ರೀರಕ್ಷೆ: ಮಂಜುನಾಥ ಭಂಡಾರಿ

Update: 2019-04-04 18:12 GMT

ಕಳಸ, ಎ.4: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಜನಪರ ಯೋಜನೆಗಳು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗೆ ಶ್ರೀರಕ್ಷೆಯಾಗಿದ್ದು, ಮೈತ್ರಿ ಪಕ್ಷಗಳ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವೀಕ್ಷಕ ಮಂಜುನಾಥ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಪಟ್ಟಣದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಳ್ಳನ್ನೇ ತಮ್ಮ ಬಂಡವಾಳ ಮಾಡಿಕೊಂಡು 5 ವರ್ಷಗಳ ಕಾಲ ಅಧಿಕಾರ ಪೊಳ್ಳು ಭರವಸೆಯನ್ನೇ ನೀಡಿದ ನರೇಂದ್ರ ಮೋದಿ ಅವರ ಸರಕಾರವನ್ನು ಜನತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಜನರ ಪ್ರಶ್ನೆಗಳಿಗೆ ಮೋದಿ ಹಾಗೂ ಬಿಜೆಪಿ ವರಿಷ್ಠರು ಉತ್ತರಿಸಲಾಗದೆ ಪಲಾಯನ ಮಾಡುತ್ತಿದ್ದಾರೆ. ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳೆಂದು ಜರಿಯುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ದೇಶದ ಶೇ.20ರಷ್ಟು ಬಡವರ ಖಾತೆಗೆ ತಿಂಗಳಿಗೆ ಆರು ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ. ನ್ಯಾಯ್ ಯೋಜನೆ, ದೇಶದ ಎಲ್ಲಾ ಬಡ ರೈತರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ದೇಶದ ಏಳಿಗೆ ಮತ್ತು ಹಿತಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕ್ಷೇತ್ರದ ಮೈತ್ರಿ ಅಭ್ಯರ್ಥಿಗೆ ಮತ ನೀಡುವಂತೆ ಇದೇ ವೇಳೆ ಕೇಳಿಕೊಂಡರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಪ್ರಧಾನಿ ಮೋದಿಯವರು ಅಧಿಕಾರವಧಿಯಲ್ಲಿ ಕೋಮುಭಾವನೆಯನ್ನು ಕೆರಳಿಸಿ, ಹಿಂದುತ್ವದ ಭಾವನೆ ಮುಂದಿಟ್ಟುಕೊಂಡು ಅಧಿಕಾರ ನಡೆಸಿದ್ದರು. ಶೋಭಾ ಕರಂದ್ಲಾಜೆ ಕ್ಷೇತ್ರದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಾರರ ಬಗ್ಗೆ ಯಾವುದೇ ಹಿತಾಸಕ್ತಿ ಕಾಪಾಡದೆ, ಬೆಳೆಗಾರರನ್ನು ಬೀದಿಗೆ ತಳ್ಳಿ, ಕೇವಲ ಕೋಮುಗಲಭೆ, ರಾಜ್ಯ ಹಾಗೂ ರಾಷ್ಟ್ರರಾಜಕಾರಣದಲ್ಲಿ ಮಗ್ನರಾಗಿ ಕಾಲಹರಣ ಮಾಡಿ, ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‌ಕುಮಾರ್, ಕಾಂಗ್ರೆಸ್ ಮುಖಂಡರಾದ ಪ್ರಭಾಕರ್, ಶಿವಾನಂದಸ್ವಾಮಿ, ಜಿಲ್ಲಾ ಎಸ್.ಸಿ.ಸೆಲ್ ವಿಭಾಗದ ಹೂವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News