ಕುತೂಹಲ ಕೆರಳಿಸಿದ ಶಿವಮೊಗ್ಗನಗರ ವಿಧಾನಸಭಾ ಕ್ಷೇತ್ರ

Update: 2019-04-04 18:19 GMT

ಶಿವಮೊಗ್ಗ, ಎ.4: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ, ಅತ್ಯಧಿಕ ಮತದಾರರಿರುವ ವಿಧಾನಸಭಾ ಕ್ಷೇತ್ರ ಶಿವಮೊಗ್ಗ ನಗರವಾಗಿದೆ. ಅಭ್ಯರ್ಥಿಯ ಗೆಲುವಿನಲ್ಲಿ ಈ ಕ್ಷೇತ್ರದಲ್ಲಿ ಗಳಿಸುವ ಮತಗಳು ಅತ್ಯಂತ ಮಹತ್ವದ್ದಾಗಿದೆ. ಈ ಕಾರಣದಿಂದ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಭಾರೀ ಕಸರತ್ತು ನಡೆಸುತ್ತಿವೆ. ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ.

ಬದಲಾದ ಸನ್ನಿವೇಶದಲ್ಲಿ ಶಿವಮೊಗ್ಗ ನಗರ ಅಸೆಂಬ್ಲಿಯು ಬಿಜೆಪಿ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷದ ಅಭ್ಯರ್ಥಿಯಾಗಿದ್ದ ಕೆ.ಎಸ್.ಈಶ್ವರಪ್ಪರವರು ದಾಖಲೆಯ ಮತ ಸಂಪಾದಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನಕುಮಾರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಕುತೂಹಲ ಕೆರಳಿಸಿದ್ದ ಜೆಡಿಎಸ್ ಅಭ್ಯರ್ಥಿ ನಿರಂಜನ್‌ರವರು ಠೇವಣಿ ಕಳೆದುಕೊಂಡಿದ್ದರು.

ಕ್ಷೇತ್ರದಲ್ಲಿರುವ ತನ್ನ ಪ್ರತಿಷ್ಠೆ-ವರ್ಚಸ್ಸನ್ನು ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರಿಸಿಕೊಂಡು ಹೋಗಲು ಬಿಜೆಪಿ ಯತ್ನಿಸುತ್ತಿದೆ. ಶತಾಯಗತಾಯ ಮತಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಹೋರಾಟ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಮೈತ್ರಿಕೂಟಕ್ಕೆ ಮುನ್ನಡೆ ಬಿಟ್ಟು ಕೊಡಬಾರದು ಎಂಬ ನಿಲುವು ಹೊಂದಿದೆ.

ಜಿಲ್ಲೆಯ ಇತರ ಅಸೆಂಬ್ಲಿ ಕ್ಷೇತ್ರಗಳಿಗಿಂತ ಇಲ್ಲಿ ಹೆಚ್ಚಾಗಿ ನರೇಂದ್ರ ಮೋದಿ ಹಾಗೂ ಹಿಂದುತ್ವ ಫ್ಯಾಕ್ಟರ್ ಕೆಲಸ ಮಾಡಲಿದೆ ಎಂಬ ವಿಶ್ವಾಸ ಆ ಪಕ್ಷದ ನಾಯಕರದ್ದಾಗಿದೆ. ಹಾಗೆಯೇ ಬಲಿಷ್ಠ ಕಾರ್ಯಕರ್ತರ ಪಡೆ ಹೊಂದಿರುವುದು ಹಾಗೂ ಪರಿಣಾಮಕಾರಿ ಪಕ್ಷ ಸಂಘಟನೆಯಿಂದ, ಲೀಡ್ ನಿರೀಕ್ಷೆಯಲ್ಲಿ ಆ ಪಕ್ಷವಿದೆ.

ಇನ್ನೊಂದೆಡೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಬಿಜೆಪಿಗೆ ಹಿನ್ನಡೆಯುಂಟು ಮಾಡಲು ಹಾಗೂ ಕಳೆದ ವಿಧಾನಸಭೆ-ಲೋಕಸಭೆ ಉಪಚುನಾವಣೆಯಲ್ಲಾಗಿರುವ ಮುಖಭಂಗದ ಸೇಡು ತೀರಿಸಿಕೊಳ್ಳಲು ತಮ್ಮದೇ ಆದ ಗೇಮ್‌ಪ್ಲಾನ್ ರೂಪಿಸುತ್ತಿವೆ. ಒಂದಾಗಿ ಚುನಾವಣೆ ಎದುರಿಸುತ್ತಿರುವುದು ಬಿಜೆಪಿ ವಿರೋಧಿ ಮತಗಳ ಕ್ರೋಢೀಕರಣದಿಂದ ಮೈತ್ರಿಕೂಟಕ್ಕೆ ಲಾಭವಾಗುವ ನಿರೀಕ್ಷೆ ಆ ಪಕ್ಷದ್ದಾಗಿದೆ.

ಆದರೆ ಪ್ರಬಲವಾಗಿರುವ ಬಿಜೆಪಿಯನ್ನು ಹಿಂದಿಕ್ಕುವುದು ಅಷ್ಟು ಸುಲಭವಲ್ಲ ಎಂಬುವುದು ಕೂಡ ಮೈತ್ರಿ ನಾಯಕರಿಗೆ ಅರಿವಿದೆ. ಈ ಕಾರಣದಿಂದ ನಾಯಕರು ವೈಮನಸ್ಸು ಮರೆತು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಎರಡು ಪಕ್ಷಗಳ ಕಾರ್ಯಕರ್ತರನ್ನೊಳಗೊಂಡ ಬೂತ್ ಸಮಿತಿಗಳನ್ನು ರಚಿಸಿದೆ.

ಮತ ಲೆಕ್ಕಾಚಾರ: 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪಗೆ ಅತ್ಯಧಿಕ 88,945 ಮತಗಳು ಬಂದಿದ್ದವು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿಗೆ 31,456 ಹಾಗೂ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ಗೆ 26,498 ಮತಗಳು ಬಂದಿದ್ದವು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ಗಿಂತ ಬಿ.ಎಸ್.ಯಡಿಯೂರಪ್ಪರವರು ಸುಮಾರು 57 ಸಾವಿರ ಮತಗಳ ಮುನ್ನಡೆ ಪಡೆದಿದ್ದರು.

2018ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಎಸ್.ಈಶ್ವರಪ್ಪಗೆ ದಾಖಲೆಯ 1,04,027 ಮತಗಳು ಬಂದಿದ್ದವು. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ 57,920 ಹಾಗೂ ಜೆಡಿಎಸ್ ಅಭ್ಯರ್ಥಿ ಎಚ್.ಎನ್.ನಿರಂಜರವರು ಕೇವಲ 5,796 ಮತ ಪಡೆಯಲಷ್ಟೇ ಶಕ್ತರಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎದುರು ಕೆ.ಎಸ್.ಈಶ್ವರಪ್ಪ 46,107 ಮತಗಳ ಲೀಡ್ ಪಡೆದಿದ್ದರು.

2018ರ ಅಕ್ಟೋಬರ್-ನವೆಂಬರ್‌ನಲ್ಲಿ ಜರುಗಿದ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರು 77,388 ಮತಗಳಿಸಿದ್ದರೆ, ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪರವರು 51,815 ಮತ ಪಡೆಯಲಷ್ಟೇ ಶಕ್ತರಾಗಿದ್ದರು. ಬಿ.ವೈ.ರಾಘವೇಂದ್ರರ ಲೀಡ್ ಅಂತರ ಸುಮಾರು 26 ಸಾವಿರದ ಆಸುಪಾಸಿನಲ್ಲಿತ್ತು.

ಕ್ಷೇತ್ರದಲ್ಲಿ ಬ್ರಾಹ್ಮಣ, ಮುಸ್ಲಿಂ, ವೀರಶೈವ-ಲಿಂಗಾಯತ, ಪರಿಶಿಷ್ಟ ಜಾತಿ, ಕುರುಬ ಮತ್ತೀತರ ವರ್ಗಗಳ ಮತದಾರರ ಸಂಖ್ಯೆ ಹೆಚ್ಚಿದೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಯಾರಿಗೆ ಲೀಡ್ ದೊರಕಲಿದೆ ಎಂಬ ಕುತೂಹಲ ಮನೆ ಮಾಡಿದ್ದು, ಏನಾಗಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಮತಗಳ ಸಂಖ್ಯೆ ಹೆಚ್ಚಿದೆ. ಮನಪಾ ಚುನಾವಣೆ ವೇಳೆ ಸುಮಾರು 8-10 ವಾರ್ಡ್‌ಗಳಲ್ಲಿ 100-150 ಮತಗಳ ಆಸುಪಾಸಿನಲ್ಲಿಯೇ ಮೈತ್ರಿ ಪಕ್ಷದ ಅಭ್ಯರ್ಥಿಗಳು ಬಿಜೆಪಿಯೆದುರು ಪರಾಭವಗೊಂಡಿದ್ದರು. ಕಳೆದ ಉಪಚುನಾವಣೆ ವೇಳೆ ಎರಡೂ ಪಕ್ಷಗಳಲ್ಲಿನ ಹೊಂದಾಣಿಕೆ ಕೊರತೆಯಿಂದ ಕೊಂಚ ಗೊಂದಲ ಉಂಟಾಗಿತ್ತು. ಆದರೆ ಈ ಚುನಾವಣೆಯಲ್ಲಿ ಈ ಎಲ್ಲಾ ಗೊಂದಲಗಳು ಪರಿಹಾರವಾಗಿವೆ. ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಇದರಿಂದ ಮೈತ್ರಿಕೂಟವು ಹೆಚ್ಚು ಮತಗಳಿಸಲಿದೆ.
ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್‌ನ ಮಾಜಿ ಶಾಸಕ

ಜಾತ್ಯತೀತ ಮತಗಳ ವಿಭಜನೆ ಮತ್ತಿತರ ಕಾರಣಗಳಿಂದ ಕಳೆದ ಕೆಲ ಚುನಾವಣೆಗಳಲ್ಲಿ ಬಿಜೆಪಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮತಗಳಿಕೆಯಲ್ಲಿ ಮುನ್ನಡೆ ಕಾಯ್ದಕೊಂಡಿರಬಹುದು. ಆದರೆ ಪ್ರಸ್ತುತ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಒಂದಾಗಿರುವುದು ಜಾತ್ಯತೀತ ಮತಗಳ ಕ್ರೋಢೀಕರಣಕ್ಕೆ ಸಹಕಾರಿಯಾಗಲಿದೆ. ಪ್ರಸ್ತುತ ಹೆಚ್ಚಿನ ಸಮಯಾವಕಾಶವೂ ಲಭ್ಯವಾಗಿರುವುದರಿಂದ ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿದ್ದೇವೆ. ಈ ಎಲ್ಲ ಅಂಶಗಳು ಶಿವಮೊಗ್ಗದಲ್ಲಿ ಮೈತ್ರಿಕೂಟದ ಮುನ್ನಡೆಗೆ ಕಾರಣವಾಗುವ ಅಂಶಗಳಾಗಿವೆ.
ಎಂ.ಶ್ರೀಕಾಂತ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಗೆ ದಾಖಲೆಯ ಸುಮಾರು 1.4 ಲಕ್ಷ ಮತಗಳು ಬಂದಿವೆ. 2014ರ ಲೋಕಸಭೆ ಚುನಾವಣೆಯಲ್ಲಿಯೂ ಭಾರೀ ಲೀಡ್ ದೊರಕಿತ್ತು. 2018ರ ಲೋಕಸಭೆ ಉಪ ಚುನಾವಣೆಯಲ್ಲಿಯೂ ಶಿವಮೊಗ್ಗದಲ್ಲಿ ಪಕ್ಷಕ್ಕೆ ಮುನ್ನಡೆ ದೊರಕಿದೆ. ಈ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದೆ. ಸಮರ್ಥ ಕಾರ್ಯಕರ್ತರ ಪಡೆಯಿದೆ. ಈ ಎಲ್ಲಾ ಕಾರಣದಿಂದ ಈ ಚುನಾವಣೆಯಲ್ಲಿಯೂ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ದೊರಕುವುದರಲ್ಲಿ ಅನುಮಾನವೇ ಇಲ್ಲ.
ಕೆ.ಎಸ್.ಈಶ್ವರಪ್ಪ, ಶಾಸಕ

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News