2 ವರ್ಷಗಳಿಂದ ಅಕ್ಷರ ದಾಸೋಹಕ್ಕೆ ಉಚಿತ ತರಕಾರಿ

Update: 2019-04-05 09:17 GMT

ಬಂಟ್ವಾಳ, ಎ.5: ಬೆಲೆ ಗಗನಕ್ಕೇರಿರುವ ಕಾರಣ ಮನೆ ಬಳಕೆಗೆ ತರಕಾರಿ ಖರೀದಿಸಲು ಒಮ್ಮೆ ಯೋಚಿಸಬೇಕಾದ ಸ್ಥಿತಿ ಇದೆ. ಹೀಗಿರುವಾಗ ಇಲ್ಲೊಬ್ಬರು ತಮ್ಮೂರಿನ ಶಾಲೆಯ ಬಿಸಿಯೂಟಕ್ಕೆ ನಿತ್ಯ ಉಚಿತವಾಗಿ ತರಕಾರಿ ಪೂರೈಸುವ ಮೂಲಕ ಔದಾರ್ಯ ಮೆರೆಯುತ್ತಿದ್ದಾರೆ.

ಬಂಟ್ವಾಳ ತಾಲೂಕಿನ ಮಜಿ ವೀರಕಂಭದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿಸಿಯೂಟಕ್ಕೆ ಮೆಲ್ಕಾರ್‌ನ ಚಂದ್ರಿಕಾ ವೆಜಿಟೇಬಲ್ಸ್‌ನ ಮಾಲಕ ಮುಹಮ್ಮದ್ ಶರೀಫ್ ಉಚಿತವಾಗಿ ತರಕಾರಿ ನೀಡುತ್ತಿದ್ದಾರೆ. ಈ ಸೇವೆ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕದಿಂದ ಏಳನೇ ತರಗತಿಯವರೆಗೆ 135 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಮಜಿ ಶಾಲೆಯ ಶಿಕ್ಷಕಿ ಸಂಗೀತಾ ಶರ್ಮ ಈ ಅಂಗಡಿಯಲ್ಲಿ ತರಕಾರಿ ಕೊಳ್ಳುವ ಸಂದರ್ಭ ಶಾಲೆಯ ಬಿಸಿಯೂಟಕ್ಕೆ ತರಕಾರಿ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಸಂದರ್ಭ ತಾನು ತರಕಾರಿಯನ್ನು ಉಚಿತವಾಗಿ ಕೊಡುತ್ತೇನೆ, ಶಾಲೆಯಿಂದ ಕೊಂಡೊಯ್ಯುವ ವ್ಯವಸ್ಥೆ ಮಾಡಿದರೆ ಆಯಿತು ಎಂದಿದ್ದೆ. ಅದರಂತೆ ಶಾಲೆಯ ಬಳಕೆಗೆ ತಕ್ಕಷ್ಟು ತರಕಾರಿಗಳನ್ನು ನೀಡುತ್ತಿದ್ದೇನೆ. ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಳೇ ವಿದ್ಯಾರ್ಥಿ ಚಿನ್ನ ಕಲ್ಲಡ್ಕ ಅವರು ತರಕಾರಿ ಕೊಂಡೊಯ್ಯುವ ಜವಾಬ್ದಾರಿ ನಿರ್ವಹಿಸುತ್ತಿ್ದಾರೆ ಎಂದು ಹೇಳುತ್ತಾರೆ ಶರೀಫ್.

ತಂದೆ, ಅಣ್ಣ ಪ್ರೇರಣೆ:

ಊಟಕ್ಕೂ ಕಷ್ಟಪಡುವ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪರದಾಡುವ ಸ್ಥಿತಿ ಹಿಂದೆ ಇತ್ತು. ಈಗ ಹಾಗಿಲ್ಲ. ಅಂಗಡಿಗೆ ಬಂದವರಿಗೆ ನೆರವಾಗುವ ಸ್ವಭಾವವನ್ನು ನಾನು ತಂದೆ ಅಬ್ದುಲ್ ಹಮೀದ್ ಮತ್ತು ಅಣ್ಣ ಮುಹಮ್ಮದ್ ನಝೀರ್ ಅವರಿಂದ ಕಲಿತೆ. ಇನ್ನೊಬ್ಬರಿಗೆ ಸಹಾಯ ಮಾಡಿದರೆ, ನಮಗೆ ಖಂಡಿತವಾಗಿಯೂ ನಷ್ಟವಾಗುವುದಿಲ್ಲ ಎಂದು ನುಡಿಯುತ್ತಾರೆ ಶರೀಫ್.

ಶಾಲೆಯ ಎರಡೆರಡು ಪದಾರ್ಥ, ಪಲ್ಯ ಮತ್ತು ಸಾಂಬಾರಿಗೆ ತರಕಾರಿ ಉಪಯೋಗ ವಾಗುತ್ತದೆ. ಶಾಲೆಯಲ್ಲಿರುವ ಕಾರ್ಯಕ್ರಮಗಳಿಗೂ ಅವರು ತರಕಾರಿ ಉಚಿತವಾಗಿ ನೀಡುತ್ತಾರೆ. ಆಲೂಗಡ್ಡೆ, ಬೀಟ್ ರೂಟ್, ಸೌತೆಕಾಯಿ ಹೀಗೆ ವೈವಿಧ್ಯಗಳೂ ಇರುತ್ತವೆ. ಒಂದು ಬಾರಿ ಮಕ್ಕಳಿಗೆಂದು ಕಲ್ಲಂಗಡಿಯನ್ನೂ ಕೊಟ್ಟಿದ್ದಾರೆ. ಹೀಗೆ ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ ಪೂರ್ವ ಪ್ರಾಥಮಿಕದಿಂದ ಏಳನೇ ತರಗತಿಯವರೆಗಿನ ಮಕ್ಕಳಿಗೆ ಬಿಸಿಯೂಟದ ಸರಕಾರ ನಿಗದಿಪಡಿಸಿದ ಆಹಾರಗಳೊಂದಿಗೆ ಸಮೃದ್ಧ ಭೋಜನಕ್ಕೆ ಪೂರಕ ತರಕಾರಿ ದೊರಕುತ್ತಿವೆ.

ಸಂಗೀತಾ ಶರ್ಮ, ಶಾಲಾ ಶಿಕ್ಷಕಿ

ಪುಟ್ಟ ಮಕ್ಕಳ ಊಟದಲ್ಲಿ ನನ್ನದೂ ಒಂದು ಸೇವೆ ಇರಲಿ ಎಂದಷ್ಟೇ ಈ ಕಾರ್ಯ ನಡೆಸುತ್ತಿದ್ದೇನೆ. ಮಕ್ಕಳ ಹೊಟ್ಟೆ ತುಂಬಿದರೆ ನನಗದೇ ಖುಷಿ.

 ಮುಹಮ್ಮದ್ ಶರೀಫ್, ತರಕಾರಿ ವ್ಯಾಪಾರಿ ಮೆಲ್ಕಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News