ಐಪಿಎಲ್: ಹೈದರಾಬಾದ್‌ಗೆ ಶಾಕ್ ನೀಡಿದ ಅಲ್ಝರಿ; ಮುಂಬೈ ಇಂಡಿಯನ್ಸ್ ಗೆ ಭರ್ಜರಿ ಜಯ

Update: 2019-04-07 03:41 GMT

ಹೈದರಾಬಾದ್, ಎ.7: ಹಿಂದಿನ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಜಾನಿ ಬ್ರೆಸ್ಟೊ ಶತಕದ ಜತೆಯಾಟ ನೀಡಿದ್ದಾರೆ. ಆದರೆ ಶನಿವಾರ ರಾತ್ರಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಇಡೀ ತಂಡದ ಸ್ಕೋರ್ ಕೂಡಾ ಮೂರಂಕಿ ತಲುಪಲಿಲ್ಲ. 96 ರನ್‌ಗಳಿಗೆ ಆಲೌಟ್ ಆದ ಹೈದರಾಬಾದ್ ತಂಡ ಮುಂಬೈಗೆ ಶರಣಾಯಿತು. ಇದಕ್ಕೆ ಕಾರಣವಾಗಿದ್ದು ಚೊಚ್ಚಲ ಐಪಿಎಲ್ ಆಡುತ್ತಿರುವ ಅಲ್ಝರಿ ಜೋಸೆಫ್ ಅವರ ದಾಖಲೆಯ ಅದ್ಭುತ ಬೌಲಿಂಗ್.

ಇಬ್ಬರೂ ಆರಂಭಿಕರನ್ನು 33 ರನ್ನುಗಳಾಗುಷ್ಟರಲ್ಲಿ ಕಳೆದುಕೊಂಡ ಸನ್‌ರೈಸರ್ಸ್‌ ಚೇತರಿಸಿಕೊಳ್ಳಲೇ ಇಲ್ಲ. ಇದಕ್ಕೆ ಕಾರಣವಾದದ್ದು ಆಂಟಿಗುವಾದ ವೇಗದ ಬೌಲರ್ ಹಾಗೂ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಅಲ್ಝರಿ ಜೋಸೆಫ್ ಅವರ ಅದ್ಭುತ ಬೌಲಿಂಗ್. ಕೇವಲ 12 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಿತ್ತ ಅಲ್ಝರಿ, ವಿರೋಧಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಮೊದಲ ಓವರ್‌ನಲ್ಲೇ ವಾರ್ನರ್ ಅವರನ್ನು ಬೌಲ್ಡ್ ಮಾಡಿದ ಅಲ್ಝರಿ ಜೋಸೆಫ್, ಶಂಕರ್, ಹೂಡಾ, ರಶೀದ್ ಖಾನ್, ಭುವನೇಶ್ವರ ಕುಮಾರ್ ಹಾಗೂ ಸಿದ್ಧಾರ್ಥ ಕೌಲ್ ಅವರಿಗೆ ಪೆವಿಲಿಯನ್ ಗೆ ಹಾದಿ ತೋರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಅತ್ಯುತ್ತಮ ಸಾಧನೆಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಪಾಕಿಸ್ತಾನದ ಸುಹೈಲ್ ತನ್ವೀರ್ 14 ರನ್‌ಗಳಿಗೆ 6 ವಿಕೆಟ್ ಕಬಳಿಸಿದ್ದು ದಾಖಲೆಯಾಗಿತ್ತು.

ಇದಕ್ಕೂ ಮುನ್ನ ಕೈರನ್ ಪೊಲಾರ್ಡ್ ಅವರ ಏಕಾಂಗಿ ಸಾಹಸದಿಂದ (26 ಎಸೆತಗಳಲ್ಲಿ 46) ಮುಂಬೈ ಗೌರವಾರ್ಹ ಮೊತ್ತ ತಲುಪಿತ್ತು. ಈ ವಿಂಡೀಸ್ ಬ್ಯಾಟ್ಸ್‌ಮನ್ ಎರಡು ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಕೊನೆಯ ಓವರ್‌ಗಳಲ್ಲಿ ಮುಂಬೈ ಸ್ಕೋರ್ ಹೆಚ್ಚಲು ಕಾರಣರಾದರು. ಮುಂಬೈ ಕೊನೆಯ ಐದು ಓವರ್‌ಗಳಲ್ಲಿ 61 ರನ್ ಗಳಿಸಿತು.

ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲಿನ ರುಚಿ ತೋರಿಸುವ ಮೂಲಕ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡಿದ ಮುಂಬೈ ಇಂಡಿಯನ್ಸ್ ಮತ್ತೊಂದು ಅರ್ಹ ಜಯ ಸಂಪಾದಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News