ಬೆಂಗಳೂರು ದಕ್ಷಿಣದ ಈ ಅಭ್ಯರ್ಥಿಗೆ ಹಳೇ ನೋಟುಗಳೇ ಆಸ್ತಿ..!

Update: 2019-04-07 17:10 GMT

ಬೆಂಗಳೂರು, ಎ.7: ದೇಶದೆಲ್ಲೆಡೆ ಲೋಕಸಭಾ ಕ್ಷೇತ್ರಗಳ ಚುನಾವಣಾ ಹಬ್ಬರ ಹೆಚ್ಚಾಗಿದೆ. ಇನ್ನೂ, ಕೆಲ ಅಭ್ಯರ್ಥಿಗಳ ಆಸ್ತಿ-ಪಾಸ್ತಿಗಳ ಲೆಕ್ಕ ನೋಡಿದರೆ, ಕುಬೇರರು ಚುನಾವಣೆ ಕಣದಲ್ಲಿ ಇದ್ದಂತೆ ಕಾಣುತ್ತದೆ. ಇವುಗಳ ಮಧ್ಯೆ ಹೋರಾಟಗಾರರೊಬ್ಬರು ಚುನಾವಣೆ ಸ್ಪರ್ಧೆಯಲ್ಲಿದ್ದು, ಇವರಿಗೆ ಹಳೇ ನೋಟುಗಳೇ ಆಸ್ತಿಯಾಗಿವೆ.

ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮೌನಿ ಹೋರಾಟಗಾರ ‘ಅಂಬ್ರೋಸ್ ಡಿಮೆಲ್ಲೋ’ ಅವರು ತಮ್ಮ ನಾಮಪತ್ರ ಸಲ್ಲಿಕೆಯ ವೇಳೆ ಸಲ್ಲಿಸಿದ್ದ ಆಸ್ತಿ ಘೋಷಣಾ ಪತ್ರದಲ್ಲಿ ಗರಿಷ್ಠ ಮುಖಬೆಲೆಯ ನಿಷೇಧಿತ ನೋಟುಗಳೇ ತನ್ನ ಆಸ್ತಿ ಎಂದು ನಮೂದಿಸಿದ್ದಾರೆ.

ನಿಷೇಧಕ್ಕೆ ವಿರೋಧ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2016ರ ನವೆಂಬರ್ 8 ರಂದು ಏಕಾಏಕಿ ಗರಿಷ್ಠ ಮುಖಬೆಲೆ 500 ಮತ್ತು 1 ಸಾವಿರ ರೂ. ಬೆಲೆಯ ನೋಟುಗಳ ಚಲಾವಣೆಯನ್ನು ಬಂದ್ ಮಾಡಿತು. ಅಂದಿನಿಂದ ಪ್ರತಿಪಕ್ಷಗಳು, ಸಂಘ-ಸಂಸ್ಥೆಗಳು ಸೇರಿದಂತೆ ಸಾಮಾಜಿಕ ವಲಯದಲ್ಲೂ ಕೆಲವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಹಳೇ ನೋಟುಗಳನ್ನು ಕೈಯಲ್ಲಿ ಹಿಡಿದು ದೇಶ್ಯಾದ್ಯಂತ ಸುತ್ತಿ ಅಂಬ್ರೋಸ್ ಡಿಮೆಲ್ಲೋ ಪ್ರತಿಭಟನೆ ನಡೆಸಿದ್ದರು. ಇದೀಗ, ಲೋಕಸಭಾ ಚುನಾವಣೆಯನ್ನು ಪ್ರತಿಭಟನೆಯ ಭಾಗ ಎಂದು ಕಾಣುವ ಇವರು, ತಮ್ಮ ಬಳಿ ಗರಿಷ್ಠ ಮುಖಬೆಲೆಯ 500 ಮತ್ತು 1 ಸಾವಿರ ರೂಪಾಯಿಯ ಒಟ್ಟು 45 ಸಾವಿರ ರೂಪಾಯಿ ಹಳೇ ನೋಟುಗಳಿರುವ ಬಗ್ಗೆ ದೃಢಪಡಿಸಿದ್ದಾರೆ.

14 ವರ್ಷ ಮೌನಿ: ಜಗತ್ತಿನೆಲ್ಲೆಡೆ ಕುಡಿಯುವ ನೀರಿಗೆ ಬೆಲೆ ನಿಗದಿ ಮಾಡಿರುವುದನ್ನು ವಿರೋಧಿಸಿ ಬರೋಬ್ಬರಿ 14 ವರ್ಷಗಳಿಂದ ಮಾತನ್ನೆ ಬಿಟ್ಟು ಮೌನವಾಗಿಯೇ ‘ಮೌನಿ ಅಂಬ್ರೋಸ್’ ಹೋರಾಟ ಮುಂದುವರೆಸಿದ್ದಾರೆ.

ಹೊಸ ನೋಟು ಬಳಸಲ್ಲ, ಹಳೇ ನೋಟುಗಳನ್ನು ನಾನೆ ಹೋಗಿ ಬದಲಾಯಿಸುವುದಿಲ್ಲ. ಇದು ನನ್ನ ಹೋರಾಟದ ಮೊದಲ ಭಾಗ ಎನ್ನುವ ಅವರು, ಇದುವರೆಗೂ ಬರೋಬ್ಬರಿ 15 ಸಾವಿರ ಮೌಲ್ಯದ ಹಳೇ ನೋಟುಗಳನ್ನು ಸಾರ್ವಜನಿಕರಿಂದ ಪಡೆದಿದ್ದಾರೆ.ಇನ್ನೂ, ವಿದೇಶಿ ಪ್ರಜೆಗಳಿಂದಲೂ ಹಳೇ ನೋಟು ಪಡೆದಿರುವುದು ವಿಶೇಷ.

ದೇಶದೆಲ್ಲೆಡೆ ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ಬಗ್ಗೆ ಈಗಾಲೂ ಪರ-ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಇನ್ನೂ, ಇದರ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ ಮಾಡಿದವರ ಸಂಖ್ಯೆ ಕಡಿಮೆ ಎನ್ನಬಹುದು. ಆದರೆ, ಈಗಲೂ ಅಂಬ್ರೋಸ್ ಡಿಮೆಲ್ಲೋ ಪ್ರತಿಭಟನೆ ಮುಂದುರೆಸಿದ್ದು, ಇದೊಂದು ಅಸಂವಿಧಾನಿಕ ನಡೆ ಎನ್ನುತ್ತಾರೆ ಅವರು.

ಪ್ರಧಾನಿ ಮೋದಿ ಜತೆ ಸ್ಪರ್ಧೆ..!

2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿಯಲ್ಲಿಯೂ ಸ್ಪರ್ಧಿಸಿದ್ದಾರೆ. ಅಲ್ಲದೇ, 2013 ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ, 2015ರಲ್ಲಿ ಶಿಕಾರಿಪುರ, 2017 ಹೆಬ್ಟಾಳ, 2018ರಲ್ಲಿ ಶಿವಾಜಿನಗರದಲ್ಲಿ ನಡೆದ ಚುನಾವಣೆಯಲ್ಲಿ ಸ್ವರ್ಧಿಸಿದ್ದಾರೆ.

‘ಚುನಾವಣೆ ಖರ್ಚು ಬರೀ 90 ರೂ..!

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಂಬ್ರೋಸ್ ಡಿ ಮೆಲ್ಲೋ ಅವರು ಚುನಾವಣೆ ವೆಚ್ಚವಾಗಿ ಕೇವಲ 90 ರೂ. ಖರ್ಚು ಮಾಡಿದ್ದಾರೆ.

Writer - -ಸಮೀರ್, ದಳಸನೂರು

contributor

Editor - -ಸಮೀರ್, ದಳಸನೂರು

contributor

Similar News