ಫಲಿಸಿದ ಸಿದ್ದರಾಮಯ್ಯ ತಂತ್ರ: ಬಿಜೆಪಿ ಪಾಳಯದಲ್ಲಿ ತಳಮಳ

Update: 2019-04-08 16:43 GMT

ಮೈಸೂರು,ಎ.8: ಮೈತ್ರಿ ಪಕ್ಷಗಳ ನಾಯಕರುಗಳಲ್ಲಿ ಇದ್ದ ಅಸಮಧಾನವನ್ನು ಶಮನಗೊಳಿಸಿ ಒಟ್ಟಿಗೆ ಕೊಂಡುಯ್ಯುವಲ್ಲಿ ಅನುಸರಿಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ತಂತ್ರ ಕೊನೆಗೂ ಫಲಿಸಿದ್ದು ಬಿಜೆಪಿ ಪಾಳಯದಲ್ಲಿ ಇದೀಗ ತಳಮಳ ಶುರುವಾಗಿದೆ.

ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳನ್ನು ಒಟ್ಟಿಗೆ ಸೇರಿಸಿ ಮೈತ್ರಿ ಅಭ್ಯರ್ಥಿಗಳ ಪರ ಕೆಲಸ ಮಾಡುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ.

ಮೈತ್ರಿ ಧರ್ಮ ಪಾಲಿಸುವಂತೆ ರಾಜ್ಯಮಟ್ಟದ ನಾಯಕರುಗಳು ಸೂಚಿಸಿದ್ದರೂ ಹಲವು ದಿನಗಳಿಂದ ಮೈಸೂರಿನ ಜೆಡಿಎಸ್ ನಾಯಕರುಗಳು ಇದಕ್ಕೆ ಸ್ಪಂಧಿಸಿರಲಿಲ್ಲ, ಇದರಿಂದ ಆತಂಕಗೊಂಡಿದ್ದ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ನಾಯಕರುಗಳ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಅದರಲ್ಲೂ ಉನ್ನತ ಶಿಕ್ಷಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಜೊತೆ ಮಾತುಕತೆ ನಡೆಸಿ ಅವರ ಮನವೊಲಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಿ ಎಂದು ಹೇಳಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ವೇಳೆಯಲ್ಲಿ ಸಿದ್ದರಾಮಯ್ಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು. ಅದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಮಡಿಲಿಗೆ ಉಳಿಸಿಕೊಂಡ ಸಿದ್ದರಾಮಯ್ಯ ಮೊದಲ ಬಾರಿಗೆ ಯಶಸ್ಸು ಕಂಡಿದ್ದರು. ನಂತರ ಜೆಡಿಎಸ್ ನಾಯಕರುಗಳು ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆಯಾಗುತ್ತಿಲ್ಲ ಎಂಬುದನ್ನು ಅರಿತ ಸಿದ್ದರಾಮಯ್ಯ ಬೆಂಗಳೂರಿನಲ್ಲೇ ಕುಳಿತು ಹೊಸ ತಂತ್ರವನ್ನು ಹಣೆದು ಎಲ್ಲರನ್ನೂ ಒಟ್ಟಿಗೆ ಸೇರಿಸುವಲ್ಲಿ ಸಫಲರಾಗಿದ್ದಾರೆ.

ಇದರ ಬೆನ್ನಲ್ಲೇ ರವಿವಾರ ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರುಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ರಣಕಹಳೆ ಊದಿದ್ದಾರೆ. ಇದರಿಂದ ತಳಮಳ ಗೊಂಡಿರುವ ಬಿಜೆಪಿ ನಾಯಕರುಗಳು ಮೈತ್ರಿಗೆ ಸೆಡ್ಡು ಹೊಡೆಯಲು ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಈ ಬಾರಿ ಬಿಜೆಪಿಗೆ ಯಾವ ಕಾರಣಕ್ಕೂ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶವನ್ನು ಉಭಯ ಪಕ್ಷಗಳ ನಾಯಕರುಗಳು ಸಾರಿದ್ದಾರೆ. ಹಾಗಾಗಿ  ಬಿಜೆಪಿ ನಾಯಕರುಗಳಿಗೆ ಆತಂಕ ಎದುರಾಗಿದೆ.

ಹಲವು ದಿನಗಳಿಂದ ಮೈತ್ರಿ ನಾಯಕರುಗಳು ಒಟ್ಟಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಿದ್ದ ವಿರೋಧಿಗಳಿಗೆ ಸಿದ್ದರಾಮಯ್ಯ ಸರಿಯಾದ ತಿರುಗೇಟು ಕೊಟ್ಟಿದ್ದಾರೆ. ಹಾಗಾಗಿ ಬಿಜೆಪಿ ಪಾಳಯದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.

ಉಭಯ ನಾಯಕರುಗಳ ಹೊಂದಾಣಿಕೆಯಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗುತ್ತಾರೋ ಅಥವಾ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುತ್ತಾರೊ ಕಾದು ನೋಡಬೇಕಿದೆ.

Writer - ನೇರಳೆ ಸತೀಶ್‍ಕುಮಾರ್

contributor

Editor - ನೇರಳೆ ಸತೀಶ್‍ಕುಮಾರ್

contributor

Similar News